ಕೋವಿಡ್ ವಾರಿಯರ್ಸ್‌ಗೆ ಕಿರುಕುಳ ➤ ಜಿಲ್ಲಾಧಿಕಾರಿಗೆ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು , ಜು.23:  ಕೋವಿಡ್-19 ಸೋಂಕಿತರ ಚಿಕಿತ್ಸೆಯಲ್ಲಿ ಶ್ರಮಿಸುತ್ತಿರುವ ವಾರಿಯರ್ಸ್‌ಗೆ ಸ್ಥಳೀಯರು ಕಿರುಕುಳ ನೀಡುತ್ತಿರುವ ದೂರು ಕೇಳಿ ಬಂದಿದೆ. ಮೂಡುಬಿದಿರೆ ತಾಲ್ಲೂಕಿನ ಶಿರ್ತಾಡಿಯ ನಿವಾಸಿಯೊಬ್ಬರು ಈ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ.

 

 

 

‘ನಾವು ಶಿರ್ತಾಡಿಯಲ್ಲಿ ವಾಸವಾಗಿದ್ದು, ನನ್ನ ಪತ್ನಿ ವೆನ್ಲಾಕ್‌ ಕೋವಿಡ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕೋವಿಡ್-19 ದೃಢವಾಗಿದೆ. ನನ್ನ ಮಗನಿಗೂ ಕೋವಿಡ್‌ ತಗಲಿದೆ. ಸದ್ಯಕ್ಕೆ ನಾವು ಹೋಂ ಕ್ವಾರಂಟೈನ್‌ನಲ್ಲಿದ್ದು, ಮನೆಗೆ ಆಶಾ ಕಾರ್ಯಕರ್ತೆಯರು, ವೈದ್ಯರು ಭೇಟಿ ನೀಡುತ್ತಿದ್ದಾರೆ. ಅಲ್ಲದೇ ನಮ್ಮ ಮನೆಯನ್ನು ಸ್ಯಾನಿಟೈಸ್‌ ಮಾಡಲಾಗಿದೆ. ನಮ್ಮ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವವರಿಗೆ ಸ್ಥಳೀಯ ಕೆಲವು ಜನರು ಬೆದರಿಕೆ ಹಾಕುತ್ತಿದ್ದಾರೆ. ಇದರಿಂದಾಗಿ ಯಾರೊಬ್ಬರೂ ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ನಾವು ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ‘ಇದರ ಜತೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಾರತಮ್ಯ ಮಾಡುತ್ತಿದ್ದು, ಇದರಿಂದ ಬೇಸತ್ತ ನನ್ನ ಪತ್ನಿ ಶುಶ್ರೂಷಕಿ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. ‘ಮೂಡುಬಿದಿರೆ ತಹಶೀಲ್ದಾರ್‌ ಅನಿತಾ ಲಕ್ಷ್ಮಿ ಅವರು ನನಗೆ ಕರೆ ಮಾಡಿ, ಶೀಘ್ರದಲ್ಲಿಯೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ, ‘ನಾವು ಶೀಘ್ರದಲ್ಲಿಯೇ ಅವರ ಮನೆಗೆ ಭೇಟಿ ನೀಡಿ, ಮಾಹಿತಿ ಪಡೆಯುತ್ತೇವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

 

 

 

error: Content is protected !!

Join the Group

Join WhatsApp Group