(ನ್ಯೂಸ್ ಕಡಬ) newskadaba.com ಕಡಬ,ಜುಲೈ 23: ಕೊರೋನ ಪ್ರಕರಣ ಹೆಚ್ಚಳದಿಂದ ದ.ಕ ಜಿಲ್ಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಇಂದು ಬೆಳಗ್ಗೆ ಮುಕ್ತಾಯವಾಗಿದ್ದು, ವಾಣಿಜ್ಯ ಚಟುವಟಿಕೆಗಳನ್ನು ಅವಕಾಶ ನೀಡಲಾಗಿರುವ ಹಿನ್ನಲೆಯಲ್ಲಿ ಜಿಲ್ಲೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಕಡಬ ಪೇಟೆಯಲ್ಲಿ ಜನಸಂದಣಿಯು ಬೆಳಿಗ್ಗೆಯಿಂದಲೇ ಹೆಚ್ಚಾಗಿದೆ. ಮೊದಲಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಅಂಗಡಿ ಮುಂಗಟ್ಟುಗಳು ತೆರೆದಿದ್ದು ವ್ಯಾಪಾರ ವಹಿವಾಟು ಆರಂಭವಾಗಿದೆ. ಇಂದು ಬೆಳಗ್ಗೆ 5 ಗಂಟೆಯ ಅನಂತರ ಲಾಕ್ ಡೌನ್ ತೆರವುಗೊಂಡಿದ್ದು ಈ ಹಿಂದೆ ಅನುಮತಿ ನೀಡಿದ್ದ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆ , ಖಾಸಗಿ ಹಾಗೂ ಸರಕಾರಿ ಕಚೇರಿಗಳು ಕಾರ್ಯಾರಂಭಿಸಿದೆ. ಮದ್ಯ ಮಾರಾಟಕ್ಕೂ ಅನುಮತಿ ನೀಡಲಾಗಿದೆ.ಇನ್ನು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಪ್ರಯಾಣಿಕರ ಸೇವೆಗಿಳಿದಿದ್ದು ಈ ಮೂಲಕ ವಿರಳವಾದರೂ ಜನಸಂಚಾರ ಆರಂಭವಾಗಿದೆ. ಕೆಲವು ಭಾಗಗಳಲ್ಲಿ ಸಾಮಾಜಿಕ ಅಂತರ ಮರೆತು , ಮಾಸ್ಕ್ ಧರಿಸದೆ ವ್ಯವಹರಿಸುವುದು ಕಂಡು ಬಂದಿದೆ.