(ನ್ಯೂಸ್ ಕಡಬ) newskadaba.com ಪುತ್ತೂರು, ಜು.21: ಕರೊನಾ ಸೋಂಕು ತಡೆಗಟ್ಟಲು ಶಾಸಕ ಸಂಜೀವ ಮಠಂದೂರು, ಉಪವಿಭಾಗೀಯ ಅಧಿಕಾರಿ ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ವಿನೂತನ ಯೋಜನೆ ಸಿದ್ಧಗೊಂಡಿದೆ. ಭಾರತ ಸರ್ಕಾರದಿಂದ ಪ್ರಮಾಣಿಕೃತಗೊಂಡು ಪುತ್ತೂರಿನಲ್ಲಿ ಸಿದ್ಧಗೊಂಡಿರುವ ಆಯುಷ್ ಕ್ವಾತ ಮತ್ತು ಆರೋಗ್ಯ ರಕ್ಷಕ್ ಮಾತ್ರೆಗಳನ್ನು 1 ಸಾವಿರ ಮನೆಗಳಿಗೆ ಉಚಿತವಾಗಿ ವಿತರಿಸಲು ಯೋಜನೆ ರೂಪಿಸಲಾಗಿದೆ.
ಪುತ್ತೂರಿನ ಆಯುರ್ವೇದ ತಜ್ಞ ಡಾ.ಹರಿಕೃಷ್ಣ ಪಾಣಾಜೆ ಸಿದ್ಧಪಡಿಸಿದ ಆಯುಷ್ ಕ್ವಾತ ಮತ್ತು ಆರೋಗ್ಯ ರಕ್ಷಕ್ ಮಾತ್ರೆಗಳನ್ನು ಪುತ್ತೂರು ನಗರಸಭೆಯ 31 ವಾರ್ಡ್‌ನ 1 ಸಾವಿರ ಮನೆಗಳಿಗೆ ಸುಮಾರು ಒಂದು ಲಕ್ಷದಷ್ಟು ಮಾತ್ರೆ ಹಂಚುವ ಯೋಜನೆಗೆ ಚಾಲನೆ ದೊರಕಿದ್ದು, ನಗರಸಭೆ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರದೆ ತಾಲೂಕಾದ್ಯಂತ ಈ ಮಾತ್ರೆಯ ವಿತರಣೆ ನಡೆಯಲಿದೆ. ಆಯುಷ್ ಕ್ವಾತ ಮತ್ತು ಆರೋಗ್ಯ ರಕ್ಷಕ್ ಎಂಬ ಹೆಸರಿನ ಮಾತ್ರೆಗಳನ್ನು ಜನರಲ್ಲಿ ಇಮ್ಯುನಿಟಿ ಹೆಚ್ಚಿಸಲು ನೀಡಲಾಗುತ್ತದೆ. ಈ ಮಾತ್ರೆಗಳನ್ನು ಶುಂಠಿ, ಕರಿಮೆಣಸು, ತುಳಸಿ ಮುಂತಾದ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾಗಿದೆ. ಆಯುಷ್ ಕ್ವಾತ ಎಂಬ ಮಾತ್ರೆಯನ್ನು ಬೆಳಗ್ಗೆ ಹಾಗೂ ಆರೋಗ್ಯ ರಕ್ಷಕ್ ಮಾತ್ರೆಯನ್ನ ರಾತ್ರಿ ತಲಾ ಒಂದರಂತೆ ಒಂದು ತಿಂಗಳು ಅಥವಾ ಎರಡು ತಿಂಗಳು ಸೇವಿಸಬೇಕಾಗುತ್ತದೆ. ಈಗಾಗಲೇ ಡಾ.ಹರಿಕೃಷ್ಣ ಪಾಣಾಜೆ ಅವರ ಫಾರ್ಮಸಿಯಲ್ಲಿ ಮಾತ್ರೆ ತಯಾರಾಗಿದೆ. ಮಾತ್ರೆ ತಯಾರಿಕಾ ಘಟಕವಾಗಿರುವ ಕುರಿಯದ ಡಾ.ಹರಿಕೃಷ್ಣ ಪಾಣಾಜೆ ಅವರ ಮಾಲೀಕತ್ವದ ಎಸ್.ಡಿ.ಪಿ ರೆಮಿಡೀಸ್ ರಿಸರ್ಚ್ ಸೆಂಟರ್ ಆಯುರ್ವೇದಿಕ್ ಔಷಧಗಳ ಉತ್ಪಾದನಾ ಘಟಕಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.