ಗಲಾಟೆ ತಡೆಯಲು ಬಂದ ಪೊಲೀಸರಿಗೆ ಹಲ್ಲೆ ➤ ಆರೋಪಿಗೆ ಥಳಿಸಿದ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಬಂಟ್ವಾಳ,ಜು.10: ಗುರುವಾರ ರಾತ್ರಿ ಲಾರಿ ಚಾಲಕರಿಗೆ ಮತ್ತು ಸಾರ್ವಜನಿಕರ ನಡುವಿನ ಗಲಾಟೆ ತಪ್ಪಿಸಲು ಬಂದ ಪೊಲೀಸರಿಗೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ನಿಂದ ಹೊಡೆದು ಹಲ್ಲೆ ಮಾಡಿದ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಮೆಲ್ಕಾರ್ ನಲ್ಲಿ ನಡೆದಿದೆ.  ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಗೋಳ್ತಮಜಲು ಗ್ರಾಮದ ಅಬ್ದುಲ್ ಸಲಾಂ (28) ಎಂದು ಗುರುತಿಸಲಾಗಿದೆ.

 

ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರಣ ನೆರೆದಿದ್ದ ಸ್ಥಳೀಯರು ಆತನಿಗೆ ಥಳಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ ಮೆಲ್ಕಾರ್ ನಲ್ಲಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿದೆ ಎಂಬುದಾಗಿ ಬಂದ ಮಾಹಿತಿಯ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ ಮತ್ತು ಮೂವರು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿದ್ದರು. ಸ್ಥಳದಲ್ಲಿ ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಅಬ್ದುಲ್ ಸಲಾಂ ಎಂಬಾತನನ್ನು ತಡೆಯಲು ಹೋದಾಗ ಆರೋಪಿಯು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.ಹಲ್ಲೆಗೊಳಗಾದ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ ಮತ್ತು ಇತರ ಮೂವರು ಪೊಲೀಸರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಮಹಿಳೆಯರ ನಗ್ನ ಮೆರವಣಿಗೆ ವೀಡಿಯೋ ವೈರಲ್ ಪ್ರಕರಣ - ಆರೋಪಿಯ ಮನೆಗೆ ಬೆಂಕಿ

 

error: Content is protected !!
Scroll to Top