(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ತಡೆದ ಸಂದರ್ಭ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ – ತಳ್ಳಾಟವುಂಟಾಗಿದ್ದು, ನೂಕುನುಗ್ಗಲಿನ ಪರಿಣಾಮ ಕೆಲವರು ಗಾಯಗೊಂಡ ಘಟನೆಯೂ ಗುರುವಾರದಂದು ನಡೆದಿದೆ.
ಈ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಸಮೀಪ ತೆರಳಲೆತ್ನಿಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆಗೊಳಿಸಲಾಗಿದೆ. ನೆಹರೂ ಮೈದಾನದ ಕ್ರಿಕೆಟ್ ಅಸೋಸಿಯೇಶನ್ ಮುಂಭಾಗ ಬಿಜೆಪಿ ನಾಯಕರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ ವಿವಿಧ ಕಡೆಗಳಿಂದ ಬೈಕ್ ನಲ್ಲಿ ಮಂಗಳೂರಿಗೆ ಬರಲು ಅವಕಾಶ ನೀಡದಿದ್ದರೂ ಇಲ್ಲಿ ಉತ್ತಮವಾಗಿ ಪ್ರತಿಭಟನೆ ನಡೆದಿದೆ. ಕೆಎಫ್ ಡಿ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು, ರಮಾನಾಥ ರೈ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಡಿವೈಎಸ್ಪಿ ಗಣಪತಿ ಸಾವು ಹಾಗೂ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ನೂಕುನುಗ್ಗಲಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ನೋಡಲು ತೆರಳುತ್ತಿದ್ದೇನೆ. ಎಲ್ಲರೂ ಶಾಂತಿಯನ್ನು ಕಾಪಾಡಬೇಕು ಎಂದರು.
ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಇನ್ನಿಲ್ಲದ ಪ್ರಯತ್ನಪಟ್ಟರು. ಈ ಸಂದರ್ಭ ಪೊಲೀಸರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಂದ ಪಾದಯಾತ್ರೆ ನಡೆಯಿತು.