(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.02: ಬೆಂಗಳೂರು ನಗರದ ಜನರ ಜೀವನಾಡಿ ಬಿಎಂಟಿಸಿ ಬಸ್. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲುತ್ತಿದೆ. ಕಳೆದ ಒಂದು ವಾರದಲ್ಲಿ 20 ಸಿಬ್ಬಂದಿಗೆ ಸೋಂಕು ತಗುಲಿದೆ. ಬಿಎಂಟಿಸಿಯ ಒಟ್ಟು 32 ಸಿಬ್ಭಂದಿಗಳಿಗೆ ಇದುವರೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ.
ಈಗಾಗಲೇ ಕೆಲವೇ ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿದ್ದು, ರಾತ್ರಿ 8 ಗಂಟೆಗೆ ಬಸ್ ಸಂಚಾರ ಸ್ಥಗಿತಗೊಳ್ಳುತ್ತಿದೆ.ಜೂನ್ 12ರಂದು ಬಿಎಂಟಿಸಿ ಸಿಬ್ಬಂದಿಗೆ ಸೋಂಕು ತಗುಲಿದ ಮೊದಲ ಪ್ರಕರಣ ದಾಖಲಾಗಿತ್ತು. ಎರಡು ವಾರಗಳಲ್ಲಿ ಅದು 16ಕ್ಕೆ ಏರಿಕೆಯಾಯಿತು. ಪ್ರಸ್ತುತ 32 ಸಿಬ್ಭಂದಿಗೆ ಸೋಂಕು ತಗುಲಿದ್ದು, 12 ಸಿಬ್ಬಂದಿ ಗುಣಮುಖರಾಗಿದ್ದಾರೆ. ಬಿಎಂಟಿಸಿ ಬಸ್‌ಗಳು ರಾತ್ರಿ 8ರ ಬಳಿಕ ಸಂಚಾರ ನಡೆಸುವುದಿಲ್ಲ. ಎಲ್ಲಾ ಡಿಪೋಗಳಿಗೆ ರಾತ್ರಿ 8 ಗಂಟೆ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಹೆಚ್ಚು ಜನರು ಇದ್ದರೆ ಮಾತ್ರ ಮೆಜೆಸ್ಟಿಕ್, ಶಿವಾಜಿನಗರ, ಬನಶಂಕರಿ, ಕೆಂಗೇರಿ, ಯಶವಂತಪುರ ಮುಂತಾದ ನಿಲ್ದಾಣಗಳಿಂದ ರಾತ್ರಿ 9 ಗಂಟೆ ತನಕ ಬಸ್ ಓಡಿಸಬಹುದು.
ಕರ್ನಾಟಕ ಸರ್ಕಾರ ರಾತ್ರಿ 8 ರಿಂದ ಬೆಳಗ್ಗೆ 5ರ ತನಕ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಇದನ್ನು ಪಾಲನೆ ಮಾಡಲು ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದರಿಂದ ಅಂದು ಸಹ ಬಸ್ ಸಂಚಾರ ನಡೆಸುವುದಿಲ್ಲ.