ಮೀನಿನ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮವಾಗಿರುತ್ತದೆ ➤ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.02. , ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು 50 ವರ್ಷಗಳನ್ನು ಪೂರೈಸಿದ ಸುಸಂದರ್ಭದಲ್ಲಿ ಮುದ್ರಿಸಲಾದ ಮೀನಿನ ಚಿತ್ರವಿರುವ ಭಾರತೀಯ ಅಂಚೆ ಚೀಟಿಯನ್ನು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತು ದ.ಕ. ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮೀನು ಉತ್ತಮ ಪೌಷ್ಟಿಕಾಂಶವನ್ನು ಹೊಂದಿರುವ ಅಹಾರವಾಗಿದೆ. ಮೀನನ್ನು ಸೇವಿಸುವವರು ಮತ್ತು ಅದರ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮವಾಗಿರುವುದಲ್ಲದೇ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.

ಪಂಜರಗಳಲ್ಲಿ ಮೀನು ಸಾಕಣೆ ಮಾಡಿದರೆ ಉತ್ಪಾದನೆಯನ್ನು ಹೆಚ್ಚಿಸಬಹುದಾದ ತಾಂತ್ರಿಕತೆಯನ್ನು ವಿಜ್ಞಾನಿಗಳು ಕೃಷಿಕರಿಗೆ ನೀಡಬೇಕಾಗಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಗೊಂಡ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಇಂತಹ ಪದ್ದತಿಗಳಿಗೆ ಪ್ರೋತ್ಸಾಹ ಕೊಡಬೇಕಾಗಿದೆ ಎಂದು ಹೇಳಿದರು.

Also Read  ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವೋಟು ಮಾಡಿ


ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಸಮುದ್ರ ಕಳೆ (ಸೀವೀಡ್) ಬೆಳೆಯುವ ತಂತ್ರಜ್ಞಾನವನ್ನು ಅಳವಡಿಸುವುದು ಅನಿವಾರ್ಯವಾಗಿರುತ್ತದೆ. ಈ ಸೀವೀಡ್ ಎಂಬುದು ಆಹಾರ ಸೇವನೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ ಮತ್ತು ಇದರಿಂದ ಔಷದ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದುದರಿಂದ ಇಂತಹ ಜಲ ಸಸ್ಯಗಳನ್ನು ಬೆಳಸುವುದರಿಂದ ಕರಾವಳಿ ತೀರಪ್ರದೇಶದಲ್ಲಿ ವಾಸಿಸುವ ಮೀನುಗಾರ ಬಾಂಧವರಿಗೆ ಒಂದು ಉಪಕಸುಬಾಗಿ ಲಾಭದಾಯಕ ಉದ್ಯೋಗವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾಲೇಜಿನ ಡೀನ್ ಡಾ. ಎ. ಸೆಂಥಿಲ್ ವೇಲ್ ಪ್ರಾಸ್ತಾವಿಸಿದರು. ಕಾಲೇಜಿನ ಜಲಪರಿಸರ ವಿಭಾಗದ ಪ್ರೋಫೇಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ಅತಿಥಿಗಳನ್ನು ಸ್ವಾಗತಿಸಿ ನಿರೂಪಣೆ ಮಾಡಿದರು. ಮಂಗಳೂರು ಮಹಾನಗರಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್, ಉಪಮೇಯರ್ ವೇದಾವತಿ, ಕಾರ್ಪೋರೇಟರ್ ರೇವತಿ ಶ್ಯಾಮಸುಂದರ್ ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಕುಮಾರನಾಯ್ಕ ಎ,ಎಸ್. ವಂದಿಸಿದರು.

error: Content is protected !!
Scroll to Top