(ನ್ಯೂಸ್ ಕಡಬ) newskadaba.com ಕಡಬ, ಜು.01. ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಅಂಗ ಸಂಸ್ಥೆಯಾದ ಹೋಯಿಗೆಬಝಾರ್ ನಲ್ಲಿರುವ ತಾಂತ್ರಿಕ ವಿಭಾಗದ ಆವರಣದಲ್ಲಿ ಮೀನುಗಾರಿಕೆಯಲ್ಲಿ ಕೌಶಾಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಭೇತಿ ಕೇಂದ್ರದ ಶಂಕು ಸ್ಥಾಪನೆಯನ್ನು ಮಂಗಳವಾರ ಮಾಡಲಾಯಿತು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ದ.ಕ. ಜಿಲ್ಲೆಯ ಉಸ್ಥುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕೊರೋನ ಸಂದರ್ಭದಲ್ಲಿ ಹೊರದೇಶದಲ್ಲಿರುವ ಕನ್ನಡಿಗರು ಸ್ವದೇಶಕ್ಕೆ ಉದ್ಯೋಗವಿಲ್ಲದೇ ಹಿಂತಿರುಗುತ್ತಿರುವ ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಸ್ಮಾರ್ಟ್ ಸಿಟಿ ಯ ಯೋಜನೆಯಡಿ ತರಬೇತಿ ಪಡೆದು ಸ್ವ-ಉದ್ಯೋಗಿಗಳಾಗಲು ಇದೊಂದು ಸುವರ್ಣಾವಕಾಶ ಎಂದು ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಯೋಜನೆಯಡಿ ನಿರ್ಮಿಸಲಾಗುವ ಈ ಕೇಂದ್ರದ ವೆಚ್ಚವು ಸುಮಾರು 2.4. ಕೋಟಿ ರೂ ಗಳೆಂದು ತಿಳಿಸಿದರು. ಮೀನುಗಾರಿಕೆಯಲ್ಲಿ ಗುರುತಿಸಲಾದ ಸುಮಾರು 8 ವಿವಿಧ ವಿಷಯಗಳಲ್ಲಿ ಕೌಶಾಲ್ಯಾಭಿವೃದ್ಧಿ ತರಭೇತಿಯನ್ನು ಕೊಡಲಾಗುವುದೆಂದು ಈ ಸಂದರ್ಭದಲ್ಲಿ ಹೇಳಿದರು. ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಸಕ್ತ ನಿರುದ್ಯೋಗ ಯುವಕ-ಯುವತಿಯರು, ವ್ಯಾಸಂಗವನ್ನು ಅರ್ಧದಲ್ಲಿ ಮೊಟಕುಗೊಳಿಸಿರುವ ವಿಧ್ಯಾರ್ಥಿಗಳು, ಗೃಹಿಣಿಯರುಗಳನ್ನು ಗುರುತಿಸಿ ಈ ಕೇಂದ್ರದಲ್ಲಿ ತರಭೇತಿಯನ್ನು ಕೊಡಲಾಗುವುದು. ಅಲ್ಲದೇ ತರಭೇತಿಯ ನಂತರ ಅವರು ಸ್ವಉದ್ಯೋಗಿಗಳಾಗಲು ಅವಕಾಶಗಳಿರುತ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ಡೀನ್ ರಾದ ಡಾ. ಎ. ಸೆಂಥಿಲ್ ವೆಲ್ ರವರು ಮಾತನಾಡಿ, ಕೌಶಾಲ್ಯಾಭಿವೃದ್ಧಿ ಕೇಂದ್ರದಿಂದ ಮೀನುಗಾರಿಕೆಯಲ್ಲಿ ವಿವಿಧ ತರಭೇತಿ ಕಾರ್ಯಕ್ರಮಗಳನ್ನು ಕಟ್ಟಡ ನಿರ್ಮಾಣ ಆದ ಕೂಡಲೇ ನಡೆಸಲಾಗುವುದು ಅಷ್ಟೇ ಅಲ್ಲದೇ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿಯೂ ಸಹಾ ಮೀನುಗಾರಿಕೆಯ ವಿವಿಧ ಕ್ಷೇತ್ರದಲ್ಲಿ ಕೌಶಾಲ್ಯಾಭಿವೃದ್ಧಿ ತರಬೇತಿಗಳನ್ನು ನಡೆಸಲು ಮೀನುಗಾರಿಕೆ ಇಲಾಖೆಗೆ ಯೋಜನೆಗಳನ್ನು ಸಲ್ಲಿಸಲಾಗಿದೆಯೆಂದು ತಿಳಿಸಿದರು.
ಕರ್ನಾಟಕದ 7 ಸ್ಮಾರ್ಟ್ ಸಿಟಿಗಳಲ್ಲಿ ಮಂಗಳೂರು ಕೂಡ ಒಂದಾಗಿದ್ದು, ಭಾರತ ದೇಶದಲ್ಲೇ ಪ್ರಪ್ರಥಮ ಕೌಶಾಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ ಇದಾಗಿರುತ್ತದೆಂದು ಮೀನುಗಾರಿಕಾ ಕಾಲೇಜಿನ ಪ್ರೊಫೆಸರ್ ಮತ್ತು ಕಾಲೇಜಿನವತಿಯಿಂದ ತರಭೇತಿಯ ಈ ಯೋಜನೆಯ ಕಾರ್ಯಕ್ರಮ ಸಂಯೋಜಕ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಅತಿಥಿಗಳಿಗೆ ಸ್ವಾಗತಿಸಿ ನಿರೂಪಣೆಯ ಮೂಲಕ ತಿಳಿಸಿದರು.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮೊಹಮ್ಮದ್ ನಝೀರ್, ಮೇಯರ್ ಶ್ರೀ ದಿವಾಕರ್ ಪಾಂಡೇಶ್ವರ್, ಉಪಮೇಯರ್ ಶ್ರೀಮತಿ ವೇದಾವತಿ, ಹೊಯಿಗೆಬಝಾರ್ ವಾರ್ಡ್ ನ ಕಾರ್ಪೋರೇಟರ್ ಶ್ರೀಮತಿ ರೇವತಿ ಶ್ಯಾಮಸುಂದರ್ ರವರು ಉಪಸ್ಥಿತರಿದ್ದರು.
ಕಾಲೇಜಿನ ವತಿಯಿಂದ ತರಭೇತಿಯ ಈ ಯೋಜನೆಯ ಇನ್ನೋರ್ವ ಕಾರ್ಯಕ್ರಮ ಸಂಯೋಜಕ ಡಾ. ಕುಮಾರನಾಯ್ಕ ಎ,ಎಸ್. ವಂದಿಸಿದರು.