(ನ್ಯೂಸ್ ಕಡಬ) newskadaba.com ಕಡಬ,ಸೆ.06, ಜಿಲ್ಲಾಧಿಕಾರಿಗಳ ಆದೇಶದಂತೆ ಎಂಡೋ ಸಂತ್ರಸ್ತರ ಕೆಲವು ಕುಟುಂಬಗಳು ತಮ್ಮ ಎ.ಪಿಎಲ್ ಪಡಿತರ ಚೀಟಿಯನ್ನು ಬಿಪಿಎಲ್ ಕಾರ್ಡಾಗಿ ಬದಲಾಯಿಸಲು ಹೋಗಿ ಅತ್ತ ಎಪಿಎಲ್ ಇಲ್ಲ ಇತ್ತ ಬಿಪಿಎಲ್ ಪಡಿತರ ಚೀಟಿ ಕೂಡಾ ಇಲ್ಲದಂತ ಸಂಕಟ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಕೆಲವು ಎಂಡೋ ಸಂತ್ರಸ್ತರ ಕುಟುಂಬದವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ನಿವೇದನೆ ಮಾಡಿಕೊಂಡ ಬಳಿಕ ಅವರ ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಮೂರು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಕೊಕ್ಕಡ ಅವರ ನೇತೃತ್ವದಲ್ಲಿ ಎಂಡೋ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ ಫಲವಾಗಿ ಜಿಲ್ಲಾಧಿಕಾರಿಯವರು ಪ್ರತಿಭಟನೆಯ ಹದಿನೈದು ದಿನದ ಬಳಿಕ ಕೊಕ್ಕಡದಲ್ಲಿ ಎಂಡೋ ಸಂಲ್ಪಾನ್ ವಿರೋಧಿ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು. ಆ ಸಂದರ್ಭದಲ್ಲಿ ಭರವಸೆ ನೀಡಿರುವ ಜಿಲ್ಲಾಧಿಕಾರಿಯವರು ಈಗಾಗಲೇ ಗುರುತಿಸಲಾಗಿರುವ 3600 ಎಂಡೋ ಸಂತ್ರಸ್ತರ ಕುಟುಂಬಗಳ ಪೈಕಿ 600 ಕುಟುಂಬಗಳು ಇನ್ನೂ ಎ.ಪಿ.ಎಲ್ ಪಡಿತರ ಚೀಟಿ ಹೊಂದಿರುವುದರಿಂದ ಅವುಗಳನ್ನು ತಕ್ಷಣ ಬಿಪಿಎಲ್ ಪಡಿತರ ಚೀಟಿಗಳನ್ನಾಗಿ ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ಸ್ಥಳದಲ್ಲಿ ಅಧಿಕಾರಿಗಳು ಎಪಿಎಲ್ ಕಾರ್ಡ್ ಹೊಂದಿರುವ ಎಂಡೋ ಸಂತ್ರಸ್ತರ ಕುಟುಂಬದವರು ತಕ್ಷಣ ಬಿಪಿಎಲ್ ಕಾರ್ಡ್ ಅರ್ಜಿ ನೀಡುವಂತೆ ಸೂಚನೆ ನೀಡಿದ್ದರು. ಇದನ್ನು ನಂಬಿರುವ ಅನೇಕ ಕುಟುಂಬಗಳು ಬಿಪಿಎಲ್ ಕಾರ್ಡ್ಗೆ ಅರ್ಜಿ ನೀಡಿ ಹಳೆಯ ಎಪಿಎಲ್ ಕಾರ್ಡ್ನ್ನು ರದ್ದುಗೊಳಿಸಿ ತಿಂಗಳು ಮೂರಾದರೂ ಇನ್ನೂ ಹೊಸ ಬಿಪಿಎಲ್ ಕಾರ್ಡ್ ಸಿಗದೆ ಕಂದಾಯ ಇಲಾಖೆ, ಗ್ರಾ,ಪಂ ಗಳಿಗೆ ಎಡತಾಕುತ್ತಿದ್ದಾರೆ.
ಈ ಬಗ್ಗೆ ರಾಮಕುಂಜ ಗ್ರಾಮದ ಸಂಪ್ಯಾಡಿ ಪಟ್ಟೆಮನೆ ಬಾಲಕೃಷ್ಣ ಗೌಡ ಎಂಬವರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ನನ್ನ ಮಗು ಎಂಡೋ ಪೀಡಿತನಾಗಿ ಮಲಗಿರುವ ಪರಿಸ್ಥಿತಿಯಲ್ಲಿ ಮನೆಯಲ್ಲೇ ಇದೆ. ಜಿಲ್ಲಾಧಿಕಾರಿಯವರ ಆದೇಶದಂತೆ ನನ್ನ ಹಳೆಯ ಎಪಿಎಲ್ ಕಾರ್ಡ್ನ್ನ ಬದಲಾಯಿಸಿ ಬಿಪಿಎಲ್ ಕಾರ್ಡ್ ಒದಗಿಸುವಂತೆ ಅರ್ಜಿ ಸಲ್ಲಿಸಿರುತ್ತೇನೆ. ಬಳಿಕ ಪುತ್ತೂರಿನ ಆಹಾರ ಇಲಾಖಾಧಿಯವರನ್ನು ಭೇಟಿ ಮಾಡಿದಾಗ ಅವರು ನನ್ನ ಹಳೆಯ ಕಾರ್ಡ್ನ್ನು ರದ್ದುಗೊಳಿಸಿ ರಾಮಕುಂಜ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ನೀಡಲು ಸಲಹೆ ನೀಡಿದರು. ಅಂತೆಯೇ ಪಂಚಾಯಿತಿಯಲ್ಲಿ ಅರ್ಜಿ ಕೂಡಾ ನೀಡಿ ನಮ್ಮ ಕುಟುಂಬದ ಸದಸ್ಯರ ಹೆಬ್ಬೆಟ್ಟು ಗುರುತು ತೆಗೆದುಕೊಂಡರು ಆದರೆ ಎಂಡೋ ಪೀಡಿತ ಮಗುವಿನ ಹೆಬ್ಬೆಟ್ಟು ಹೊಂದಿಕೆಯಾಗಲೇ ಇಲ್ಲ. ಬಳಿಕ ಕಡಬ ತಹಶಿಲ್ದಾರ್ ಕಛೇರಿಗೆ ಮಗುವನ್ನು ಕರೆದುಕೊಂಡು ಹೋದರೂ ಅಲ್ಲಿ ಕೂಡಾ ಹೆಬ್ಬೆಟ್ಟು ಗುರುತು ಹೊಂದಿಕೆಯಾಗಿಲ್ಲ. ಕಣ್ಣಿನ ಗುರುತು ಕೂಡಾ ಹೊಂದಿಕೆಯಾಗಿಲ್ಲ. ಇದರಿಂದ ಮನೆಗೆ ವಾಪಾಸ್ಸಾಗಬೇಕಾಯಿತು. ಮಗುವನ್ನು ಎಲ್ಲಾ ಕಡೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನನ್ನ ಕುಟುಂಬಕ್ಕೆ ಇದ್ದ ಎ.ಪಿಎಲ್ ಕಾರ್ಡು ಇಲ್ಲ ಇತ್ತ ಬಿಪಿಎಲ್ ಕೂಡಾ ಇಲ್ಲದಂತಾಗಿದೆ. ಇದು ಬಾಲಕೃಷ್ಣ ಅವರ ಒಬ್ಬರ ಸಮಸ್ಯೆ ಅಲ್ಲ ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲಿಸಿದ ಇನ್ನಷ್ಟು ಎಂಡೋ ಸಂತ್ರಸ್ತರ ಪಾಡು ಇದೇ ಆಗಿದೆ. ರಾಮಕುಂಜ- ಕೊೖಲ ಗ್ರಾಮದಲ್ಲಿ ಮೂರು ಕುಟುಂಬ ಇಂತಹ ಪರಿಸ್ಥಿಯಲ್ಲಿ ಇದೆ. ಇನ್ನಷ್ಟು ಕುಟುಂಬಗಳು ಈ ಪಟ್ಟಿಯಲ್ಲಿವೆ. ಈ ಸಮಸ್ಯೆಗೆ ಜಿಲ್ಲಾಧಿಕಾರಿಯವರ ಮೌಖಿಕ ಆದೇಶವೇ ಕಾರಣ, ಲಿಖಿತ ಆದೇಶ ನೀಡಿದರೆ ಅಧಿಕಾರಿಗಳು ಏನಾದರೂ ಕ್ರಮ ಕೈಗೊಳ್ಳಲು ಸಾಧ್ಯ ಇನ್ನಾದರೂ ಜಿಲ್ಲಾಧಿಕಾರಿಯವರ ಎಂಡೋ ಸಂತ್ರಸ್ತ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಒದಗಿಸುವಲ್ಲಿ ತಕ್ಷಣ ಸೂಕ್ತ ಕ್ರಮ ಜರಗಿಸಬೇಕು ಎಂದು ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಅಗ್ರಹಿಸಿದ್ದಾರೆ.