ದ.ಕ. ಜಿಲ್ಲಾ ಸಾಲ ಯೋಜನೆ ಬಿಡುಗಡೆ

ಮಂಗಳೂರು, ಜೂ. 25, ದಕ್ಷಿಣ ಕನ್ನಡ ಜಿಲ್ಲೆಯ 2020-21 ರ ಜಿಲ್ಲಾ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿದರು.

ಜಿಲ್ಲೆಯ 2020-21 ರ ಜಿಲ್ಲಾ ಸಾಲ ಯೋಜನೆಯ ಮೊತ್ತ ರೂ. 18 ಸಾವಿರ ಕೋಟಿಯಾಗಿದ್ದು, ಅವುಗಳಲ್ಲಿ ಆದ್ಯತೆ ವಲಯಕ್ಕೆ ರೂ 13,399 ಕೋಟಿ ಮೀಸಲು ಆಗಿರುತ್ತದೆ. ಆದ್ಯತಾ ವಲಯದ ಕ್ಷೇತ್ರಗಳಾದ ಕೃಷಿ ರೂ. 7498 ಕೋಟಿ, ಎಂಎಸ್‍ಎಂಇ – ರೂ. 3716 ಕೋಟಿ, ವಸತಿ ರೂ 1300 ಕೋಟಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ರೂ. 154 ಕೋಟಿ ಗುರಿ ನಿಗದಿಪಡಿಸಲಾದೆ. ಈ ಗುರಿಗಳನ್ನು ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ, ಖಾಸಗಿ ವಾಣಿಜ್ಯ, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಿಗೆ ನಿರ್ವಹಣೆ ಮತ್ತು ಸಂಭಾವ್ಯತೆಯ ಆಧಾರದ ಮೇಲೆ ಹಂಚಲಾಗಿದೆ. ಬ್ಯಾಂಕ್‍ವಾರು, ಶಾಖಾವಾರು, ತಾಲೂಕುವಾರು ಸಾಲ ಯೋಜನೆಯಲ್ಲದೆ, ಜಿಲ್ಲಾ ಸಾಲಯೋಜನೆ ಕೈ ಪಿಡಿಯ ಇತರ ಉಪಯುಕ್ತ ಮಾಹಿತಿಗಳಾದ ಜಿಲ್ಲೆಯ ಸಂಕ್ಷಿಪ್ತ ವರದಿ, ಭಾರತ ಸರಕಾರ, ರಾಜ್ಯ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ಪ್ರಮುಖ ನೀತಿಗಳು, ಬ್ಯಾಂಕ್‍ಗಳ ತಾಲೂಕುವಾರು ಸೇವಾ ವಯಲಗಳ ವಿವರ, ನಗರ ವಾರ್ಡ್‍ಗಳ ಹಂಚಿಕೆ, ಬೆಳೆ, ಮೀನುಗಾರಿಕೆ, ಪಶು ಸಂಗೋಪನೆಗಳಿಗೆ ವರ್ಷ 2020-21 ಕ್ಕೆ ನಿಗದಿ ಪಡಿಸಲಾದ ಹಣಕಾಸು ಪ್ರಮಾಣ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತೆ ಕೇಂದ್ರಗಳ ವಿವರ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಉಜಿರೆ ಬಗ್ಗೆ ಮಾಹಿತಿ, ಸರಕಾರ ಪ್ರಾಯೋಜಿತ ಯೋಜನೆಗಳ ಮಾರ್ಗಸೂಚಿಗಳು, ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಮತ್ತು ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳ ಹಣಕಾಸು ವ್ಯವಹಾರ ಶಾಖೆಗಳ ವಿವರಗಳನ್ನೊಳಗೊಂಡಿರುತ್ತದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸೆಲ್ವಮಣಿ ಆರ್, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಯೋಗೀಶ್ ಆಚಾರ್ಯ, ನಬಾರ್ಡ್ ವಿಭಾಗೀಯ ಉಪ ವ್ಯವಸ್ಥಾಪಕ ಎಸ್. ರಮೇಶ್, ಮಂಗಳೂರು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ರಮಾಕಾಂತ್ ಭಟ್, ಪುತ್ತೂರು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ನಂಜುಂಡಪ್ಪ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರವೀಣ್ ಎಂ.ಪಿ ಮತ್ತಿತರರು ಉಪಸ್ಥಿತರಿದ್ದರು.

Also Read  ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ 24 ಗಂಟೆಗಳಲ್ಲಿ 103 ಮಂದಿಗೆ ಕೊರೋನಾ ಪಾಸಿಟಿವ್

error: Content is protected !!
Scroll to Top