(ನ್ಯೂಸ್ ಕಡಬ) newskadaba.com ಪುತ್ತೂರು ,ಜೂ.24: ಅಡಿಕೆ ಧಾರಣೆ ಪ್ರತಿ ದಿನ ಏರುತ್ತಿರುವ ಕಾರಣ ತಮ್ಮ ನಿರೀಕ್ಷಿತ ಧಾರಣೆ ಬರುವವರೆಗೆ ಅಡಕೆ ಮಾರುಕಟ್ಟೆಗೆ ತಾರದಿರಲು ಬೆಳೆಗಾರರು ಅಘೋಷಿತ ನಿರ್ಣಯ ಕೈಗೊಂಡ ಸೂಚನೆ ಸಿಗುತ್ತಿದೆ. ಪರಿಣಾಮವೋ ಎಂಬಂತೆ ಧಾರಣೆ ಹೆಚ್ಚುತ್ತಿದ್ದರೂ ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಲವ ಲವಿಕೆ ಕಂಡು ಬರುತ್ತಿಲ್ಲ. ಕ್ಯಾಂಪ್ಕೋ ಮತ್ತು ಖಾಸಗಿ ಮಾರುಕಟ್ಟೆ ಅಡಿಕೆಗಾಗಿ ಕಾಯುತ್ತಿದ್ದರೂ, ಬೆಳೆಗಾರರು ಮಾತ್ರ ಬೆಳೆಯ ಬೆಲೆಯನ್ನು ರಿಮೋಟ್ ಕಂಟ್ರೋಲ್ ಮಾಡುವ ರೀತಿಯಲ್ಲಿ ಚಾಣಾಕ್ಷ ತಂತ್ರ ಅನುಸರಿಸುತ್ತಿದ್ದಾರೆ. ಮಂಗಳವಾರ ಕ್ಯಾಂಪ್ಕೋದಲ್ಲಿ ಹೊಸ ಅಡಕೆ 325 ರೂ.ಗೆ ಖರೀದಿಯಾಗಿದೆ. ಸೋಮವಾರ 320 ಇತ್ತು .
ನಾಲ್ಕು ದಿನಗಳ ಹಿಂದಷ್ಟೇ ಹೊಸ ಅಡಿಕೆಗೆ 310 ರೂ. ಇತ್ತು. ನಂತರ ಇದು 315ಕ್ಕೆ ಏರಿತು. ಹಳೆ ಅಡಿಕೆ 325 ರೂ.ಗಳಿದ್ದು, ಬಳಿಕ 330ಕ್ಕೆ ಏರಿತು. ಈಗ ಮತ್ತೆ ಧಾರಣೆ ಏರಿದೆ. ಇದೇ ರೀತಿ ಮುಂದುವರಿದರೆ ಅಡಿಕೆ ಧಾರಣೆ ಸಾರ್ವಕಾಲಿಕ 400ರ ಗಡಿ ಮುಟ್ಟಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಬೆಳೆಗಾರರು. ಮತ್ತು ಎಲ್ಲರೂ ಇದೇ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲೂ ಅಡಿಕೆ ಖರೀದಿಗೆ ಎಪಿಎಂಸಿ, ಕ್ಯಾಂಪ್ಕೊ ಅನುವು ಮಾಡಿಕೊಟ್ಟ ಕಾರಣ ಬೆಳೆಗಾರರು ತಮ್ಮ ಖರ್ಚಿಗೆ ಬೇಕಾಗುವಷ್ಟು ಮಾರಿ ತೃಪ್ತಿಪಟ್ಟು ಕೊಂಡಿದ್ದಾರೆ. ಹೀಗಾಗಿ ಈಗ ಮಾರಾಟ ಮಾಡುವ ದರ್ದು ಕಾಣುತ್ತಿಲ್ಲ. ಇದಕ್ಕಾಗಿ ದರ ಇನ್ನಷ್ಟು ಏರಲಿ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.