(ನ್ಯೂಸ್ ಕಡಬ) newskadaba.com ಮಂಗಳೂರು ,ಜೂ.23: ದ.ಕ.ಜಿಲ್ಲೆಯಲ್ಲಿ ಮೊದಲ ಬಾರಿಗೆ ಆರೋಗ್ಯ ಸೇತು ಆ್ಯಪ್ ಮೂಲಕ ಕರೊನಾ ರೋಗಪೀಡಿತನನ್ನು ಗುರುತಿಸಲಾಗಿದೆ. ಮಂಗಳೂರಿನ ಎಕ್ಕೂರಿನ ಮೀನು ಮಾರಾಟ ಮಾಡುವ ಯುವಕನ ಬಗ್ಗೆ ಮೊದಲು ಶಂಕೆ ವ್ಯಕ್ತವಾಗಿ, ನಂತರ ಪರೀಕ್ಷೆಯಲ್ಲಿ ಆತ ರೋಗಿ ಎಂದು ಸಾಬೀತಾಗಿದೆ. ವಿಶೇಷವೆಂದರೆ, ಈ ಯುವಕನಿಗೆ ಕೋವಿಡ್ ತಗುಲಿರುವ ವಿಚಾರ ಆರೋಗ್ಯ ಇಲಾಖೆ ಅಧಿಕಾರಿಗಳಿಗಿಂತ ಮೊದಲು ತಿಳಿದದ್ದು ನೆರಮನೆಯವರಿಗೆ.
ಆರೋಗ್ಯ ಸೇತು ಆ್ಯಪ್ ಮೂಲಕ ಅವರಿಗೆ ಈ ಮಾಹಿತಿ ಗೊತ್ತಾಯಿತು. ಆ್ಯಪ್ ಕೋವಿಡ್ ಲಕ್ಷಣವಿರುವ ವ್ಯಕ್ತಿ ಸಮೀಪದಲ್ಲಿದ್ದಾಗ ಎಚ್ಚರಿಸುವ ಕೆಲಸ ಮಾಡುತ್ತದೆ. ಈ ಕಾರಣದಿಂದ ನೆರಮನೆಯವರು ಯುವಕನನ್ನು ವಿಚಾರಿಸಿದ್ದು ರೋಗ ಲಕ್ಷಣವಿರುವುದನ್ನು ಆತ ಒಪ್ಪಿಕೊಂಡ. ನಂತರ ಆರೋಗ್ಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು. ಅದುವರೆಗೂ ವಿಷಯ ಬಹಿರಂಗಪಡಿಸದ ಯುವಕನ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.ಈ ಯುವಕ ಬಂದರಿಗೆ ಹೋಗಿ ಮೀನು ತಂದು ಮನೆ ಮನೆಗೆ ಹೋಗಿ ಮೀನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆತನಿಂದ ಮೀನು ಖರೀದಿ ಮಾಡಿದ್ದವರು ಆತಂಕಕ್ಕೊಳಗಾಗಿದ್ದಾರೆ.