ಸೈಕಲ್ ಸವಾರಿ ಮತ್ತು ಪೋಲಿಯೋ ಡ್ರಾಪ್ಸ್

(ನ್ಯೂಸ್ ಕಡಬ) newskadaba.com ,ಜೂ.22: 1980ರ ಕಾಲಘಟ್ಟ. ನಾನಾಗ ಎರಡನೇ ತರಗತಿಯಲ್ಲಿ ಓದುತ್ತಿದ್ದ. 1973ರಲ್ಲಿ ಹುಟ್ಟಿದ ನನಗೆ ಆಗ 7 ವರ್ಷವಾಗಿತ್ತು. ನಮ್ಮೂರು ಚೂಂತಾರು ಸಮೀಪದ, ಶೇಣಿಯ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಸಮಯವದು. ಆ ಸಂದರ್ಭದಲ್ಲಿ ಪೊಲಿಯೋ ಡ್ರಾಪ್ಸ್ ಹಾಕುವುದು ಈಗಿನಂತೆ ಎಲ್ಲೆಡೆ ಭರದಿಂದ ನಡೆಯುತ್ತಿತ್ತು. ನಮ್ಮಪ್ಪನಿಗೆ ನಾನು ಸೇರಿ ನಾಲ್ಕು ಮಕ್ಕಳು ಬೆನ್ನು ಬೆನ್ನಿಗೆ ಹುಟ್ಟಿದ ಕಾರಣದಿಂದ ನಮಗೆಲ್ಲರಿಗೂ ವರ್ಷದಷ್ಟೆ ಅಂತರ ಇತ್ತು. ತಮ್ಮ, ಅಣ್ಣ, ಅಕ್ಕ ಮತ್ತು ನನಗೆ ಹೀಗೆ ನಾಲ್ವರಿಗೂ ಪೊಲಿಯೋ ಡ್ರಾಪ್ಸ್ ಹಾಕಿಸಬೇಕಿತ್ತು.

ನಮ್ಮಪ್ಪ ವೃತ್ತಿಯಲ್ಲಿ ಪುರೋಹಿತರು ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕಾಲಘಟ್ಟ ಅದಾಗಿತ್ತು. ತಂದೆ ಪುರೋಹಿತರಾದ ಕಾರಣದಿಂದ ಭಟ್ಟರ ಮಕ್ಕಳು ಎಂಬ ಸಲುಗೆಯಿಂದ ಊರಲ್ಲಿ ನಡೆಯುತ್ತಿದ್ದ ಎಲ್ಲ ಮದುವೆ, ಮುಂಜಿ, ಶ್ರಾದ್ಧ, ಪೂಜೆ ಹೀಗೆ ಎಲ್ಲದಕ್ಕೂ ನಾವು ತಂದೆಯವರ ಜೊತೆ ಹೋಗಿ ಹೊಟ್ಟೆ ತುಂಬಾ ತಿನ್ನುತ್ತಿದ್ದ ಕಾಲ ಅದಾಗಿತ್ತು. ಮನೆಯಲ್ಲಿ ಕಡು ಬಡತನವಿದ್ದರೂ ಹೊಟ್ಟೆ ಮತ್ತು ಬಟ್ಟೆಗೆ ನಮ್ಮ ತಂದೆ ಎಂದೂ ಕಡಿಮೆ ಮಾಡಿದವರಲ್ಲ. ಪೊಲಿಯೋ ಡ್ರಾಪ್ಸ್ ಹಾಕುವ ದಿನ ನಮ್ಮಪ್ಪನಿಗೆ ಬೇರೆ ಧಾರ್ಮಿಕ ಕ್ರಿಯೆಗೆ ಹೋಗಬೇಕಿದ್ದ ಕಾರಣ ಬೆಳಿಗ್ಗೆಯೇ ನಮಗೆಲ್ಲರಿಗೂ ಪೊಲಿಯೋ ಡ್ರಾಪ್ಸ್ ಹಾಕಿಸಬೇಕು ಎಂದು ತಂದೆ ನಿಶ್ಚಯಿಸಿದ್ದರು.

 

 

ನಮ್ಮ ತಂದೆಯ ಬಳಿಯಲ್ಲಿ ಇದ್ದಿದ್ದು ಒಂದು ಹಳೆಯ ಸೈಕಲ್, ನಾಲ್ಕು ಮಕ್ಕಳನ್ನು ಏಕಕಾಲಕ್ಕೆ ನಮ್ಮ ಮನೆಯಿಂದ 5 ಕಿ.ಮೀ. ದೂರದ ಕುಕ್ಕುಜಡ್ಕ ಎಂಬಲ್ಲಿಗೆ ಕರೆದೊಯ್ಯಬೇಕಾಗಿತ್ತು. ಹಾಗೆಂದು ಮಕ್ಕಳಿಗೆ ಹಾಕಬೇಕಾದ ಪೊಲಿಯೋ ಡ್ರಾಪ್ಸ್ ಹಾಕಲೇ ಬೇಕಾಗಿತ್ತು. ನಮ್ಮ ಅಪ್ಪಯ್ಯನ ‘ಪಿತೃಪ್ರಜ್ಞೆ’ ಜಾಗ್ರತವಾಗಿತ್ತು. ಏನಾದರೂ ಮಾಡಿ ಡ್ರಾಪ್ಸ್ ಹಾಕಿಸಲೇ ಬೇಕೆನ್ನುವ ದೃಢ ನಿರ್ಧಾರಕ್ಕೆ ಅವರು ಬಂದಿದ್ದರು. ಸೈಕಲ್‍ನ ಮುಂಭಾಗದ ರಿಮ್‍ನ ಮೇಲೆ ದಿಂಬು ಇಟ್ಟು ನಾನು ಮತ್ತು ತಮ್ಮನನ್ನು ಕುಳ್ಳಿರಿಸಿದ್ದರು. ಹಿಂಭಾಗದಲ್ಲಿನ ಕ್ಯಾರಿಯರ್ ಜಾಗದಲ್ಲಿ ಅಕ್ಕ ಮತ್ತು ಅಣ್ಣನನ್ನು ಕೂರಿಸಿದ್ದರು. ಒಂದು ದೊಡ್ಡ ಬೈರಾಸಿನಿಂದ ತನ್ನ ನಾಲ್ಕು ಮಕ್ಕಳನ್ನು ತನ್ನ ಸುತ್ತ ಕಟ್ಟಿದ್ದರು. ಮಕ್ಕಳು ಬೀಳಬಾರದು ಎಂಬ ದೃಷ್ಟಿಯಿಂದ ತನ್ನ ಮಕ್ಕಳನ್ನು ತಮ್ಮ ಹೊಟ್ಟೆಯ ಭಾಗದ ಸುತ್ತ ಕಟ್ಟಿಕೊಂಡು ಎಲ್ಲಿಯೂ ನಿಲ್ಲಿಸದೆ 5 ಕಿ.ಮೀ. ಪ್ರಯಾಣ ಮಾಡಿದ್ದರು.

Also Read  ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ►ಜೈ ತುಳುನಾಡು ಸಂಘಟನೆ ವತಿಯಿಂದ ಟ್ವೀಟ್ ಅಭಿಯಾನ

 

ಶ್ರಮಜೀವಿಯಾದ ಅಪ್ಪನ ಬೆವರಿನ ಹನಿಗಳು ನಮ್ಮ ಮೈಮೇಲೆ ಬಿದ್ದು ಅಂಗಿ ಒದ್ದೆಯಾದ ದಿನಗಳು ಇನ್ನು ಮಾಸಿಲ್ಲ. ಅಪ್ಪನ ಆ ಬೆವರಿನ ವಾಸನೆಯನ್ನು ನೆನೆದರೆ ಈಗಲೂ ನನಗೆ ರೋಮಾಂಚನವಾಗುತ್ತದೆ. ಎಷ್ಟೇ ಕಷ್ಟವಿದ್ದರೂ ಯಾರೊಂದಿಗೂ ಹೇಳದೆ ತನ್ನ ಪಿತೃತ್ವದ ಜವಾಬ್ದಾರಿಯನ್ನು ನೆರವೇರಿಸಿದ ನನ್ನ ಅಪ್ಪನನ್ನು ನೆನೆದಾಗ ನನಗೆ ಈಗಲೂ ಹೆಮ್ಮೆ ಅನಿಸುತ್ತದೆ. ಈಗ 80ರ ಹರೆಯದ ನನ್ನ ಅಪ್ಪ ನನ್ನ ಐಷಾರಾಮಿ ಮರ್ಸಿಡಿಸ್ ಬೆನ್ಜ್ ಕಾರಿನ ಮುಂದಿನ ಸೀಟಿನಲ್ಲಿ ನಿರ್ಲಿಪ್ತ ಭಾವದಿಂದ ಕುಳಿತು ಸೀಟು ಬೆಲ್ಟ್ ಹಾಕಲು ಪರದಾಡುವಾಗ ನನ್ನ ಕಣ್ಣುಗಳೆರಡು ಒದ್ದೆಯಾಗಿರುವುದಂತೂ ನಿಜವಾದ ಮಾತು. ನನ್ನ ಮಗಳು ಅಜ್ಜನಿಗೆ ಸೀಟು ಬೆಲ್ಟ್ ಹಾಕಲು ಬರುವುದಿಲ್ಲ ಎಂದು ನಗುವಾಗ ನನ್ನ ಅಪ್ಪ ಹೇಳುತ್ತಿದ್ದ ”ಹಣ್ಣೆಲೆ ಬೀಳುವಾಗ ಚಿಗುರೆಲೆ ನಕ್ಕಿತಂತೆ” ಎಂಬ ಮಾತು ನೆನೆದ ನಾನು ಮೌನಿಯಾಗುತ್ತೇನೆ.

Also Read  ಗುಂಡ್ಯ: ಬೈಕ್ - ಸ್ಕಾರ್ಪಿಯೋ ಢಿಕ್ಕಿ ► ಬೈಕ್ ಸವಾರ ಮೃತ್ಯು

 

ನನ್ನಪ್ಪ ಇದಾವುದೇ ಪರಿವೇ ಇಲ್ಲದೆ ಎಲ್ಲಿಗೆ ಹೋಪದು ಮಗ ಎಂದು ಕೇಳುವಾಗ ತನ್ನ ಜೀವನದ ಪಯಣದ ಬಗ್ಗೆ ನನಗೆ ಒಂದು ಕ್ಷಣ ಅವಾಕ್ಕಾಗಿ ನಾನು ತೆರೆದ ಬಾಯಿ ಮುಚ್ಚುವುದನ್ನೇ ಮರೆಯುತ್ತೇನೆ. ಈಗಿನ ಐಷಾರಾಮಿ ಕಾರಿನ ಪ್ರಯಾಣದಲ್ಲಿ ನಾನಾಗಲೀ, ನನ್ನಪ್ಪನಾಗಲಿ ಬೆವರುವ ಪ್ರಮೇಯವಂತೂ ಇಲ್ಲವೇ ಇಲ್ಲ. ಆದರೆ ನನಗಂತೂ 80ರ ದಶಕದ ಆ ಅಪ್ಪನ ಜೊತೆಗಿನ ಸೈಕಲ್ ಸವಾರಿಯ ಮುಂದೆ ಇಂದಿನ ಸುಗಂಧಭರಿತ ಗಾಳಿಯಿರುವ ಕಾರಿನ ಪ್ರಯಾಣ ಉಸಿರುಗಟ್ಟಿಸುವುದಂತೂ ಸತ್ಯವಾದ ವಿಚಾರ. ಶ್ರಮಜೀವಿ ಅಪ್ಪನ ಬೆವರಿನ ವಾಸನೆ ಉಂಟಾದ ಪ್ರೀತಿಯ ಮುಂದೆ ಇವೆಲ್ಲವೂ ನಗಣ್ಯ ಎಂಬುದು ನನ್ನ ಮನದಾಳದ ಮಾತು. ವ್ಯಾವಹಾರಿತ ಮತ್ತು ವ್ಯಾಪಾರಿ ಮನೋಭಾವದ ಈ ಜಗತ್ತಿನಲ್ಲಿ ಅಪ್ಪ ಮಕ್ಕಳ ಸಂಬಂಧವು ಹಳಸಿ, ಸಂಬಂಧವೂ ಮೌಲ್ಯಾಧಾರಿತವಾಗಿ ರುವುದು ಇಂದಿನ ಯುವಜನರ ಮನೋಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನುವುದು ಅರಗಿಸಿಕೊಳ್ಳಲೇಬೇಕಾದ ಕಟು ವಾಸ್ತವ ಆಗಿರುತ್ತದೆ.

ಡಾ|| ಮುರಲೀ ಮೋಹನ ಚೂಂತಾರು

error: Content is protected !!
Scroll to Top