(ನ್ಯೂಸ್ ಕಡಬ) newskadaba.com ತುಮಕೂರು, ಜೂ.22,. ಬೆಳಗ್ಗೆ ತಾನೇ ಮದುವೆ ಮುಗಿಸಿದ ನವಜೋಡಿಗೆ ಸಂಜೆ ವೇಳೆ ಕ್ವಾರಂಟೈನ್‍ನಲ್ಲಿ ಲಾಕ್ ಆದ ಘಟನೆ ತುಮಕೂರಿನ ಹೇರೂರಿನಲ್ಲಿ ನಡೆದಿದೆ.
ಮದುವೆ ಮನೆಯಲ್ಲಿ ಅಡುಗೆ ಭಟ್ಟರೋರ್ವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ನವಜೋಡಿ ಸೇರಿದಂತೆ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ.
ಹೇರೂರಿನ ವರ ಗಿರೀಶ್‍ಗೆ ಕಾಟೇನಹಳ್ಳಿಯ ವಧು ಮೀನಾಕ್ಷಿಯ ಜೊತೆ ವಿವಾಹವಾಗಿತ್ತು. ಈ ಮದುವೆಗೆ ಅಡುಗೆ ಮಾಡಲು ಬಂದ ಅಡುಗೆ ಭಟ್ಟರೋರ್ವರು ಚಿಟ್ಟದ ಕುಪ್ಪೆ ನಿವಾಸಿ 50 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಜೂನ್ 14 ರಂದು ಈತ ಸ್ವಾಬ್ ಕೊಟ್ಟು ಬಂದಿದ್ದ. ರಿಪೋರ್ಟ್ ಬರುವವರೆಗೂ ಈತನನ್ನು ಅಧಿಕಾರಿಗಳು ಕ್ವಾರಂಟೈನ್‍ನಲ್ಲಿ ಇಡಬೇಕಿತ್ತು. ಆದರೆ ಈತ ಎಲ್ಲಾ ಕಡೆ ಓಡಾಡಿಕೊಂಡು ಅಡುಗೆ ಕೆಲಸ ಮಾಡಿಕೊಂಡಿದ್ದ.
ಜೂನ್ 18 ರಂದು ಅಡುಗೆ ಭಟ್ಟನ ಪಾಸಿಟಿವ್ ರಿಪೋರ್ಟ್ ಬಂದಿದ್ದು, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಅಡುಗೆ ಭಟ್ಟ ಇದ್ದ ಮದುವೆ ಮನೆಗೆ ದಾಳಿ ಮಾಡಿದ್ದಾರೆ. ಅಡುಗೆ ಭಟ್ಟ, ವಧುವರರು, ಕ್ಯಾಮೆರಾಮನ್, ವಧು ಮತ್ತು ವರನ ಹತ್ತಿರ ಸಂಪರ್ಕ ಇದ್ದವರು ಸೇರಿ ಒಟ್ಟು 56 ಜನರನ್ನು ಕ್ವಾರಂಟೈನ್ ಮಾಡಿದ್ದಾರೆ ಎಂದು ವರನ ಸಂಬಂಧಿ ಹೇಳಿದ್ದಾರೆ.
ಅಂದಹಾಗೆ ಸೋಂಕಿತ ಅಡುಗೆ ಭಟ್ಟನ ಟ್ರಾವೆಲ್ ಹಿಸ್ಟರಿ ಏನೂ ಇಲ್ಲ. ಟಿ.ಬಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದ ಈತ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಸೋಂಕು ಈತನಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.