(ನ್ಯೂಸ್ ಕಡಬ) newskadaba.com ಕಡಬ,ಸೆ.05, ಆಲಂಕಾರು ಗ್ರಾಮದ ಚಾಮೆತ್ತಡ್ಕ, ಪೊಸೋನಿ, ವ್ಯಾಪ್ತಿಯ ನಿವಾಸಿಗಳಿಗೆ ಈ ವರ್ಷವು ಕುಡಿಯುವ ನೀರಿನ ಯೋಜನೆ ಮರೀಚಿಕೆಯಾಗಲಿದೆ. ಈ ಯೋಜನೆಗಾಗಿ ತಾಲೂಕು ಪಂಚಾಯಿತಿಯಿಂದ 50 ಸಾವಿರ ರೂಪಾಯಿ ಪೈಪ್ ಲೈನಿಗಾಗಿ ಮಾತ್ರ ಅನುದಾನ ಬಿಡುಗಡೆಯಾಗಿದ್ದು ಬೇರೆ ಯಾವುದೇ ಮೂಲಗಳಿಂದ ಅನುದಾನ ಬಿಡುಗಡೆಯಾಗದಿರುವುದು ಯೋಜನೆಗೆ ಹಿನ್ನಡೆಯಾಗಿದೆ.
ಈ ಭಾಗದಲ್ಲಿ ಬೇಸಿಗೆಯ ಆರಂಭದಲ್ಲಿಯೇ ಕುಡಿಯುವ ನೀರಿಗಾಗಿ ಅಭಾವ ಉಂಟಾಗುತಿದ್ದು, ಕಳೆದ ಬಾರಿ ಜನಪ್ರತಿನಿಧಿಗಳು ನೀಡಿದ್ದ ಭರವಸೆಯ ಆಧಾರದಲ್ಲಿ ಈ ವರ್ಷ ನೀರಿಗಾಗಿ ಜನತೆಯ ಅಲೆದಾಟ ನಿಲ್ಲುವುದೆಂದು ನಿರೀಕ್ಷಿಸಲಾಗಿತ್ತು.
ಚಾಮೆತಡ್ಕ, ಪೊಸೋನಿಯ ಜನತೆಗೆ ಈ ಬಾರಿಯು ಬೇಸಿಗೆಯಲ್ಲಿ ನೀರಿಗಾಗಿ ಹೊೖಗೆಯಲ್ಲಿ ಗುಂಡಿ ತೋಡುವ ಶಾಪದಿಂದ ಮುಕ್ತವಾಗದೆ ನೀರಿನ ಮೂಲವನ್ನು ಹುಡುಕುವ ಕಾಯಕ ಮುಂದುವರಿಯಲಿದೆ. ಕಳೆದ ವರ್ಷದಿಂದ ಈ ಭಾಗದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೊಳವೆಬಾವಿ ಮತ್ತು ಟ್ಯಾಂಕ್ ನಿರ್ಮಾಣವಾಗುತ್ತದೆ ಎಂದು ಸ್ಥಳಿಯಾಡಳಿತ ಜನಪ್ರತಿನಿಧಿಗಳಿಂದ ಭರವಸೆ ಸಿಕ್ಕಿತ್ತು. ಆದರೆ ಭರವಸೆ ಮಾತ್ರ ಅಪ್ಪಟ ರಾಜಕೀಯ ಭರವಸೆಯಾಗಿಯೇ ಉಳಿದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನೀರಿಗಾಗಿ ಕುಮಾರಧಾರ ಕಿರು ನದಿಯ ಉದ್ದಗಲಕ್ಕೂ ಜೇಸಿಬಿ ಯಂತ್ರ ಮತ್ತು ಮಾನವ ಶ್ರಮದ ಮೂಲಕ ಗುಂಡಿಯನ್ನು ತೋಡುವ ಕಾಯಕ ಮುಂದುವರಿಯಲಿದೆ.
ಈ ವ್ಯಾಪ್ತಿಯಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಜನತೆ ಸ್ವಂತ ಬಾವಿ ಕೊರೆಯಲು ಆರಂಭಿಸಿದ್ದಾರೆ. ಕಳೆದ ಬಾರಿ ಮೂರು ಕುಟುಂಬಗಳು ನೂತನ ತೆರೆದ ಬಾವಿಯನ್ನು ಕೊರೆದು ನೀರಿನ ಮೂಲವನ್ನು ಶೋಧಿಸಿದ್ದಾರೆ. ಕಿರು ತೋಡಿನಲ್ಲಿ ಗುಂಡಿಯನ್ನು ಒಮ್ಮೆ ದುರಸ್ತಿ ಮಾಡಿದರೆ ಕೇಲವ 15ರಿಂದ 25 ದಿನ ಮಾತ್ರ ನೀರು ನಿಲ್ಲುತ್ತದೆ. ಮತ್ತೆ ಇದು ಮರಳು ತುಂಬಿ ತೆರೆದಂತಹ ಗುಂಡಿ ಜರಿದು ಬಿದ್ದು ಮುಚ್ಚುತ್ತಿವೆ. ಮತ್ತೆ ಇದನ್ನು ರಿಪೇರಿ ಮಾಡಿದರೆ ನೀರು ಉಪಯೋಗಿಸಲು ಕಡೀಮೆ ಪಕ್ಷ 5 ದಿನವಾದರೂ ಬೇಕಾಗುತ್ತದೆ. ಇದೀಗ ನೀರು ಮಣ್ಣು ಮಿಶ್ರತವಾಗಿರುವುದರಿಂದ ಇದು ತಿಳಿಯಾಗಲು ಬಹುದಿನ ಬೇಕಾಗುತ್ತದೆ. ಇಂತಹ ಸಂಧರ್ಭದಲ್ಲಿ ಕಾಲೋನಿಯ ಜನ ಕುಡಿಯುವುದಕ್ಕಾಗಿ ಸುಮಾರು 2ಕಿ.ಮೀ ದೂರದ ಕುಮಾರಧಾರ ನದಿಗೆ ನೀರಿಗಾಗಿ ಅಲೆದಾಡಬೇಕಾಗುತ್ತದೆ. ಬಾವಿ ತೋಡಿದರು ನೀರು ಸಿಗದಿರುವ ಪರಿಸ್ಥಿತಿಯಲ್ಲಿರುವ ಜನತೆಗೆ ಕುಮಾರಧಾರ ನದಿ ನೀರನ್ನು ಕುಡಿಯಲು ಉಪಯೋಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಸಕಾಲದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ.
ಆಲಂಕಾರು ಗ್ರಾಮದ ಚಾಮೆತ್ತಡ್ಕ, ಪೊಸೋನಿ, ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಯನ್ನು ಪಂಚವಾರ್ಷಿಕ ಯೋಜನೆಯಡಿ ಸೇರಿಸಿಕೊಳ್ಳಲಾಗಿದೆ. ಸಮರ್ಪಕ ನೀರಿನ ವ್ಯವಸ್ಥೆಗೆ ಅಂದಾಜು 20 ಲಕ್ಷ ರೂಪಾಯಿಯ ಅನುದಾನ ಅಗತ್ಯವಿದೆ. ಈ ವ್ಯಾಪ್ತಿಯಲ್ಲಿ 67 ಮನೆಗಳಿದ್ದು 1000ಮೀಟರ್ ದೂರದವರೆಗೆ ಪೈಪ್ಲೈನ್ ಕಾಮಗಾರಿಯಾಗಬೇಕಿದೆ. ಅನುದಾನವನ್ನು ಗ್ರಾಮ ಪಂಚಾಯತ್ನಿಂದ ಭರಿಸಿಲು ಅಸಾಧ್ಯ. ಇದಕ್ಕಾಗಿ ತಾ.ಪಂ, ಜಿ.ಪಂ ಮತ್ತು ಶಾಸಕರಲ್ಲಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ಅನುದಾನವನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಒತ್ತಡ ಹಾಕಲಾಗುವುದು – ಸುಧಾಕರ ಪೂಜಾರಿ ಕಲ್ಲೇರಿ, ಉಪಾಧ್ಯಕ್ಷ ಆಲಂಕಾರು ಗ್ರಾಮ ಪಂಚಾಯಿತಿ.
ಆಲಂಕಾರು ಗ್ರಾಮದ ಚಾಮೆತ್ತಡ್ಕ, ಪೊಸೋನಿ, ವ್ಯಾಪ್ತಿಯ ಕುಡಿಯುವ ನೀರಿನ ವ್ಯಸ್ಥೆಗೆ ಪೈಪ್ಲೈನ್ಗಾಗಿ 50 ಸಾವಿರದ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಕ್ರಿಯಾಯೋಜನೆಯ ಪ್ರಕ್ರಿಯೆಯು ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಪೈಪ್ಲೈನ್ನ ಕಾಮಗಾರಿ ಪ್ರಾರಂಭಗೊಳ್ಳಲಿದೆ – ತಾರಾ. ತಾ.ಪಂ ಸದಸ್ಯೆ ಆಲಂಕಾರು ಕ್ಷೇತ್ರ.