(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.04. ಬಿಜೆಪಿ ಯುವ ಮೋರ್ಚಾ ಘಟಕವು ಸೆಪ್ಟೆಂಬರ್ 7 ಗುರುವಾರದಂದು ಆಯೋಜಿಸಿರುವ ಮಂಗಳೂರು ಚಲೋ ಬೈಕ್ ರಾಲಿಗೆ ಮಂಗಳೂರು ಪೋಲಿಸ್ ಆಯುಕ್ತರಾದ ಟಿ. ಆರ್. ಸುರೇಶ್ ಅನುಮತಿ ನಿರಾಕರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಯುಕ್ತರಾದ ಟಿ. ಆರ್. ಸುರೇಶ್, ರಾಜ್ಯ ಬಿಜೆಪಿ ಯುವ ಮೋರ್ಚಾವು ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶದಿಂದ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಲಿದೆ ಹಾಗೂ ನಗರದಲ್ಲಿ ಶಾಂತಿ ಕದಡುವ ಆತಂಕವಿರುವ ಹಿನ್ನೆಲೆಯಲ್ಲಿ, ಬೈಕ್ ಜಾಥಾ ನಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದಿದ್ದಾರೆ. ಮಂಗಳೂರು ನಗರ ಪೋಲಿಸರ ಈ ನಿರ್ಬಂಧಕ್ಕೆ ಜಿಲ್ಲಾ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸದ ನಳೀನ್ ಕುಮಾರ್ ಕಟೀಲ್ ತೀವೃವಾಗಿ ಖಂಡಿಸಿದ್ದಾರೆ. ಈ ಬೈಕ್ ಜಾಥಾ ಯಾವುದೇ ಕಾರಣಕ್ಕೆ ನಿಲ್ಲುವುದಿಲ್ಲ, ಮಾಡಿಯೇ ತೀರುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸಂಸದರು ಹೇಳಿಕೆ ನೀಡಿದ್ದಾರೆ. ವಿವಿಧ ಕಡೆಗಳಿಂದ ಬರುವ ಈ ಬೈಕ್ ಜಾಥಾಕ್ಕೆ ಈಗಾಗಲೇ 10,000ಕ್ಕೂ ಅಧಿಕ ಕಾರ್ಯಕರ್ತರು ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿವೆ.