ಪ್ರಾಥಮಿಕ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿಗೆ ಹಲ್ಲೆ ► ಕೊಣಾಜೆ ಶಾಲೆಯಲ್ಲಿ ತರಗತಿ ಬಹಿಷ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಸೆ.04. ಪುತ್ತೂರು ತಾಲೂಕಿನ ಕೊಣಾಜೆ ಗ್ರಾಮದ ಕೊಣಾಜೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷರೊಬ್ಬರು ಥಳಿಸಿರುವ ಹಿನ್ನೆಯಲ್ಲಿ ಪೋಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರ ಬೆಂಬಲದೊಂದಿಗೆ ಶಿಕ್ಷಕನ ವರ್ಗಾವಣೆಗೆ ಪಟ್ಟು ಹಿಡಿದು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಕೊಣಾಜೆ ಗ್ರಾಮದ ಮುಚ್ಚುರೋಡಿ ಗಿರೀಶ್ ಎಂಬವರ ಪುತ್ರ ಕೊಣಾಜೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ಚೇತನ್ ಎಂಬ ವಿದ್ಯಾರ್ಥಿಗೆ ಅದೇ ಶಾಲಾ ಶಿಕ್ಷಕ ಅಜಿತ್ ಕುಮಾರ್ ಜೈನ್ ಎಂಬವರು ಆಗಸ್ಟ್‌ 31ರಂದು ಮರದ ಅಡಿಕೋಲು ಹಾಗೂ ಕೈಯಿಂದ ಥಳಿಸಿದ್ದು ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲ್ಲೆ ನಡೆಸಿದ ಸಂದರ್ಭದಲ್ಲಿ ತಡೆಯಲು ಹೋದ ಇನ್ನಿತ ಇಬ್ಬರು ವಿದ್ಯಾಥಿಗಳಿಗೂ ಶಿಕ್ಷಕ ಥಳಿಸಿದ್ದಾರೆ. ಈ ಕಾರಣಕ್ಕಾಗಿ ಶಿಕ್ಷಕರನ್ನು ವರ್ಗಾಯಿಸಬೇಕೆಂದು ಆಗ್ರಹಿಸಿ ಸೋಮವಾರದಂದು ಬೆಳಿಗ್ಗೆಯಿಂದ ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಶಿಕ್ಷಕನ ದುಂಡಾವರ್ತನೆಯಿಂದ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ಜನಪ್ರತಿನಿಧಿ, ಪೋಷಕರಲ್ಲೂ ಶಿಕ್ಷಕನ ನಡವಳಿಕೆ ಅಸಂಬದ್ದವಾಗಿದೆ. ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದ ಪ್ರಯೋಗಿಸಿ ನಿಂದಿಸುತ್ತಾರೆ. ಈ ಹಿಂದೆ ಈ ಶಿಕ್ಷಕ ಕರ್ತವ್ಯ ನಿರ್ವಹಿಸುತಿದ್ದ ಶಾಲೆಯಲ್ಲೂ ಇಂತಹ ವರ್ತನೆಯಿಂದ ಅಲ್ಲಿನ ವಿದ್ಯಾಭಿಮಾನಿಗಳು ಬೇಸತ್ತಿದ್ದರು. ಇಲ್ಲಿನ ಶಾಲೆ ಉತ್ತಮವಾಗಿಯೇ ನಡೆಯುತ್ತಿತ್ತು. ಆದರೆ ಕೆಲವೊಬ್ಬರ ಷಡ್ಯಂತದಿಂದ ಆ ಶಿಕ್ಷಕನನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಬೇಕಾದ ಶಿಕ್ಷಕನ ವರ್ತನೆಯಿಂದ ಪೋಷಕರು ಬೇಸತ್ತಿದ್ದಾರೆ. ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುವ ಇಂತಹ ಶಿಕ್ಷಕನನ್ನು ಕಛೇರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿ ಎಂದ ಪ್ರತಿಭಟನಕಾರರು ಶಿಕ್ಷಕನ ಕಡ್ಡಾಯ ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ಬದಲಿ ಶಿಕ್ಷಕರನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಸೆ.9 ರೊಳಗೆ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Also Read  ರಾಜ್ಯ ಸರಕಾರದಿಂದ ಭರ್ಜರಿ ಗುಡ್ ನ್ಯೂಸ್ - ಗೃಹಜ್ಯೋತಿ ಯೋಜನೆಯಡಿ ಮೂರು ಜ್ಯೋತಿಗಳು ವಿಲೀನ

ಕೊಣಾಜೆ ಗ್ರಾ.ಪಂ.ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ ಕೊಣಾಜೆ, ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ಗೌಡ ಎಸ್, ಉಪಾಧ್ಯಕ್ಷ ರಾಮಣ್ಣ ಆಚಾರಿ, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಮಧ್ಯಾಹ್ನದ ವೇಳೆ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪರವಾಗಿ ಉಪ್ಪಿನಂಗಡಿ, ಸವಣೂರು ವಲಯ ಶಿಕ್ಷಣ ಸಂಯೋಜಕ ಕುಕ್ಕ ಎಂ. ಆಗಮಿಸಿ ಪ್ರತಿಭಟನಕಾರರ ಮನವಿ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಬೋಧನೆ ಮಾಡುವುದು ಕಾನೂನಿಗೆ ವಿರುದ್ದವಾಗಿದೆ. ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಶಿಕ್ಷಕ ಅಜಿತ್ ಆಳ್ವರವರ ವಿರುದ್ದ ಸೂಕ್ತ ಕ್ರಮಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಮಾಡಲಾಗುವುದು. ಮಕ್ಕಳನ್ನು ತಕ್ಷಣದಿಂದ ತರಗತಿಗೆ ಕಳುಹಿಸಿಕೊಡಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು. ಅಂತೆಯೇ ವಿದ್ಯಾರ್ಥಿಗಳು ತರಗತಿಗೆ ಹಾಜರಾದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಮನವಿ ಸ್ವೀಕರಿಸುವ ವೇಳೆ ಶಿಕ್ಷಣ ಸಂಯೋಜಕರೊಂದಿಗೆ ಶಾಲಾ ಮುಖ್ಯಗುರು ರಾಮಕೃಷ್ಣ ಕೆ. ಉಪಸ್ಥಿತರಿದ್ದರು.

Also Read  ? ನೇರ ಪ್ರಸಾರ | Live? ಕಡಬಕ್ಕೆ ಆಗಮಿಸಿದ ಕುಕ್ಕೇ ಸುಬ್ರಹ್ಮಣ್ಯದ ಬ್ರಹ್ಮರಥ ➤ ರಥವನ್ನು ಸ್ವಾಗತಿಸಲು ಕಡಬದಲ್ಲಿ ಸೇರಿದ ಜನಸ್ತೋಮ

ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳಾದ ಕೃಷ್ಣಪ್ಪ, ವಾಸುದೇವ ಕೆರ್ನಡ್ಕ, ಲಿಂಗಪ್ಪ ಮುಚ್ಚರೋಡಿ, ಶಾಲಿನಿ, ಪುಷ್ಪಾವತಿ, ಗೋವಿಂದ, ಕೊಣಾಜೆ ಪಂಚಾಯಿತಿ ಸದಸ್ಯರಾದ ಚಂದ್ರಾವತಿ, ಪ್ರಮುಖರಾದ ವಾಸುದೇವ ಭಟ್ ಕಡ್ಯ, ಮೋಹನ್ದಾಸ್ ಬೃಂತೋಡು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಉಪ್ಪಿನಂಗಡಿ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು.

 

error: Content is protected !!
Scroll to Top