(ನ್ಯೂಸ್ ಕಡಬ) newskadaba.com ಕರಾವಳಿ,ಜೂ.15: ಇಂದಿನಿಂದ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ರಜೆ ಘೋಷಣೆಯಾಗಿದೆ. ಈ ಬಾರಿ 46 ದಿನಗಳ ಕಾಲ ಕರಾವಳಿಯಲ್ಲಿ ಮೀನುಗಾರಿಕೆ ಬಂದ್ ಇರಲಿದೆ. ಮುಂಗಾರು ಪ್ರಾರಂಭವಾದ ಹಿನ್ನಲೆಯಲ್ಲಿ ಜೂನ್ 1 ರಿಂದ ಬಂದ್ ಆಗಬೇಕಾಗಿದ್ದ ಆಳಸಮುದ್ರ ಮೀನುಗಾರಿಕೆಯನ್ನ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿತ್ತು.
ಆದರೆ ಈ ಬಾರಿ ಕೊರೊನಾ ಸೊಂಕು ಹರಡುವಿಕೆಯ ಭೀತಿ ಹಾಗೂ ಚಂಡಮಾರುತದಿಂದಾಗಿ ಮೀನುಗಾರರಿಗೆ, ಮೀನುಗಾರಿಕೆ ನಡೆಸುವುದಕ್ಕೆ ಅವಕಾಶ ಸಿಗದಂತಾಗಿದ್ದು, ಈ ಅತಂತ್ರ ಪರಿಸ್ಥಿತಿ ಮೀನುಗಾರರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಜೂನ್, ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಎರಡು ತಿಂಗಳು ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವುದರಿಂದ ಯಾರೂ ಕೂಡಾ ಮೀನುಗಳನ್ನ ಹಿಡಿಯುವಂತಿಲ್ಲ.ಯಾವಾಗಲೂ ಮೀನು ಸಂತತಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿತ್ತುಆದರೆ ಈ ಬಾರಿ ಕೊರೊನಾ ವೈರಸ್ ಆತಂಕ ಕಾರಣದಿಂದಾಗಿ ಮಾರ್ಚ್ ತಿಂಗಳಿನಿಂದಲೇ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಸರ್ಕಾರ ಜೂನ್ ತಿಂಗಳಲ್ಲಿ 14 ದಿನಗಳ ಕಾಲ ಮೀನುಗಾರಿಕಾ ಅವಧಿಯನ್ನ ವಿಸ್ತರಣೆ ಮಾಡಿದರೂ ಚಂಡಮಾರುತದ ಕಾರಣ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಾಲ ಮಾಡಿ ಮೀನುಗಾರಿಕೆ ಪ್ರಾರಂಭಿಸಿದ್ದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು ಮೀನುಗಾರಿಕೆಯೇ ಇಲ್ಲದೇ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.