(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ,ಜೂ.14: ರಾಜ್ಯದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಮುಂದೆ ಪರಿಸ್ಥಿತಿ ನೋಡಿಕೊಂಡು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಶನಿವಾರ ಸುಬ್ರಹ್ಮಣ್ಯದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆ ಫಲಿತಾಂಶ ಭಿನ್ನವಾಗಿ ಲಭಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ವ್ಯಕ್ತಿಗಳು ದೂರದೂರುಗಳಿಂದ ಬಂದು ತುಂಬಾ ದಿನ ಕಳೆದು ಪರೀಕ್ಷೆ ಮಾಡಿಸಿದಾಗ ವ್ಯತ್ಯಾಸ ಕಂಡುಬರುತ್ತಿರಬಹುದು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ರಾಜ್ಯದ 62 ದೇಗುಲಗಳ ವ್ಯವಸ್ಥಾಪನ ಸಮಿತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊರೊನಾ ಇರುವುದರಿಂದ ದಿನಾಂಕ ವಿಸ್ತರಿಸಲು ಮನವಿಗಳು ಬರುತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನೆರವಾಗಲು ಸುಳ್ಯ ಮತ್ತು ಕಡಬ ತಾಲೂಕುಗಳಿಗೆ ಎರಡು ಬೋಟ್ ಮತ್ತು ಲೈಫ್ ಜಾಕೆಟ್ ನೀಡಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ವ್ಯವಸ್ಥೆ ಮಾಡಲಾಗುತ್ತದೆ
ಕರ್ನಾಟಕ ಮತ್ತು ಕೇರಳ ಸಂಪರ್ಕಕ್ಕೆ ಸಂಬಂಧಿಸಿ ದ.ಕ. ಮತ್ತು ಕಾಸರ ಗೋಡು ಜಿಲ್ಲೆಯ ಗಡಿಯಲ್ಲಿ ಕೆಲ ರಸ್ತೆಗಳ ಬಂದ್ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿ ಕೊಡಲು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸುಳ್ಯ ತಾಲೂಕು ಪ್ರದೇಶದಲ್ಲಿ 25 ಎಕ್ರೆಗೆ ಕಡಿಮೆಯಿಲ್ಲದಂತೆ ಭೂಮಿಯನ್ನು ಕಂದಾಯ ಇಲಾಖೆ ಪರಿಶೀಲಿಸಿ ಗುರುತಿಸಿಕೊಟ್ಟಲ್ಲಿ ಸುಸಜ್ಜಿತ, ಮಾದರಿ ಗೋಶಾಲೆಯನ್ನು ಸುಬ್ರಹ್ಮಣ್ಯ ದೇವಸ್ಥಾನದ ಮೂಲಕ ನಿರ್ಮಿಸಲಾಗುವುದು. ಕೊರೊನಾ ಕಾರಣಗಳಿಂದ ಬಾಕಿಯಾಗಿರುವ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆ.15ರ ಬಳಿಕ ನಡೆಸಲು ತೀರ್ಮಾನಿಸಲಾಗಿದೆ.