ದಂತ ಚಿಕಿತ್ಸೆಗಿದು ಸಮಯವಲ್ಲ!!!

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಜನಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ವಿಶ್ವದ ಎಲ್ಲಾ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಮತ್ತು ಕೌಟುಂಬಿಕ ಚಟುವಟಿಕೆಗಳು ಸ್ತಬ್ಧವಾಗಿದೆ. ಎಲ್ಲರೂ ಕೊರೋನಾ ಭಯದಿಂದ ಮನೆಯೊಳಗೆ ಬಂದಿಯಾಗಿದ್ದಾರೆ. ದಂತ ವೈದ್ಯರ ಪಾಡಂತೂ ಬಹಳ ಶೋಚನೀಯವಾಗಿದೆ. ಒಂದೆಡೆ ಹಲ್ಲುನೋವಿನಿಂದ ಬಳಲುತ್ತಿರುವ ರೋಗಿಗಳ ಒತ್ತಡ, ಇನ್ನೊಂದೆಡೆ ದಂತ ಚಿಕಿತ್ಸೆಯಿಂದ ಕೊರೋನಾ ರೋಗ ಹರಡುತ್ತದೆ ಎಂಬ ವೈಭವೀಕರಣದ ಹೇಳಿಕೆಗಳು. ಅತ್ತ ದರಿ ಇತ್ತ ಹುಲಿ ಎಂಬಂತೆ ದಂತ ವೈದ್ಯರ ಪಾಡು ಯಾರಿಗೂ ಬೇಡವಾಗಿದೆ. ಆದರೆ ಒಂದಂತೂ ಸತ್ಯ. ದಂತ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ದಂತ ವೈದ್ಯರು ರೋಗಿಯ ಮುಖ, ಬಾಯಿಯ ಸುತ್ತಮುತ್ತ ಸ್ಪರ್ಶಿಸಬೇಕಾದ ಅನಿವಾರ್ಯತೆ ಇರುತ್ತದೆ. ಮತ್ತು ಹಲ್ಲಿನಲ್ಲಿ ಡ್ರಿಲ್ ಮಾಡುವ ಸಂದರ್ಭದಲ್ಲಿ ಸೃಷ್ಟಿಯಾಗುವ ಕಿರಿ ಹನಿಗಳಿಂದಾಗಿ ವೈರಾಣುಗಳು ಗಾಳಿಯಲ್ಲಿ ಸೇರಿಕೊಂಡು ಬಹಳ ಸುಲಭವಾಗಿ ರೋಗ ಹರಡುವ ಸಾಧ್ಯತೆ ಇದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಕೆಲವೊಂದು ಕೋವಿಡ್-19 ರೋಗ ಹೊಂದಿರುವ ರೋಗಿಗಳು ಯಾವುದೇ ಕೋವಿಡ್-19 ರೋಗದ ಲಕ್ಷಣ ತೋರಿಸದೇ ಇರುವ ಕಾರಣದಿಂದಾಗಿ ಯಾರಿಗೆ ರೋಗ ಇದೆ ಅಥವಾ ಇಲ್ಲ ಎಂದು ಕಂಡು ಹಿಡಿಯುವುದು ಬಹಳ ಕಷ್ಟಸಾಧ್ಯ. ಈ ಕಾರಣದಿಂದಾಗಿ ಯಾವ ದಂತ ಚಿಕಿತ್ಸೆ ಮಾಡಬೇಕು ಮತ್ತು ಯಾವ ದಂತ ಚಿಕಿತ್ಸೆ ಮಾಡಬಾರದು ಎಂಬುದರ ಮಾಹಿತಿ ದಂತ ವೈದ್ಯರು ಮತ್ತು ರೋಗಿಗಳಿಗೆ ಇರಬೇಕು. ಬಹುತೇಕ ದಂತ ಸಂಬಂಧಿ ಚಿಕಿತ್ಸೆಗಳಿಗೆ ಒತ್ತಡ ತುಂಬಿದ ಗಾಳಿ ಬಳಸಿ ಏರ್‍ಮೋಟಾರ್ ಎಂಬ ಯಂತ್ರ ಬಳಸುವ ಕಾರಣದಿಂದ ಅಲ್ಲಿ ಕಿರುಹನಿಗಳು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ ಶೇಕಡಾ 80 ರಷ್ಟು ದಂತ ಚಿಕಿತ್ಸೆಗಳನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಈ ಕಾಲಘಟ್ಟದಲ್ಲಿ ಮಾಡದಿರುವುದೇ ಸೂಕ್ತ ಎಂಬುದು ತಜ್ಞ ದಂತ ವೈದ್ಯರ ಒಕ್ಕೊರಲಿನ ಅಭಿಮತವಾಗಿರುತ್ತದೆ.

Also Read  ರಾಮಕುಂಜದ ಅನುಪ್ರಿಯಾ ಇಂಡೋ- ಟಿಬೆಟ್ ಗಡಿ ಪಡೆಗೆ ಆಯ್ಕೆ

ಯಾವ ಚಿಕಿತ್ಸೆ ಮಾಡಬಹುದು?
ವಿಪರೀತವಾದ ಹಲ್ಲುನೋವು ಇದ್ದಾಗ ಚಿಕಿತ್ಸೆಯನ್ನು ಮುಂದೂಡುವುದು ಸಹ್ಯವಲ್ಲ. ಇಂತಹಾ ಸಂದರ್ಭಗಳಲ್ಲಿ ಹಲ್ಲಿನೊಳಗೆ ತೂತು ಮಾಡಿ ಕೀವು ತೆಗೆದಲ್ಲಿ ಮಾತ್ರ ಹಲ್ಲು ನೋವು ನಿವಾರಣೆ ಆಗುತ್ತದೆ. ಈ ರೀತಿಯ ಚಿಕಿತ್ಸೆಗಳನ್ನು ಮುಂದೂಡುವುದು ಸೂಕ್ತವಲ್ಲ.
ಹಲ್ಲು ಕೀಳಿಸುವುದನ್ನು ಸಾಕಷ್ಟು ಮುಂಜಾಗ್ರತೆ ವಹಿಸಿ ಮಾಡಬಹುದಾಗಿದೆ. ಹಲ್ಲು ಕೀಳುವಾಗ ವೈದ್ಯರು ಯಾವುದೇ ಡ್ರಿಲ್ ಬಳಸುವುದಿಲ್ಲ. ವೈದ್ಯರು ಮುಖಕವಚ, ತಲೆಗವಚ, PPಇ ಕಿಟ್ ಬಳಸಿ ಸುರಕ್ಷಿತವಾಗಿ ಮಾಡಬಹುದಾಗಿದೆ. ಸಂಪೂರ್ಣವಾಗಿ ಹಾಳಾಗಿ ಹೋದ ಹಲ್ಲನ್ನು ರೂಟ್‍ಕೆನಾಲ್ ಥೆರಪಿ ಮಾಡಲು ಸಾಧ್ಯವಿಲ್ಲವೆಂದಾದಲ್ಲಿ ತೆಗೆಸುವುದೇ ಸೂಕ್ತವಾಗಿದೆ. ಈ ಚಿಕಿತ್ಸೆಯಿಂದ ವೈದ್ಯರಿಗೆ, ರೋಗಿಗೆ ಮತ್ತು ಸಮುದಾಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಹಲ್ಲಿಗೆ ಏಟು ಬಿದ್ದು ಹಲ್ಲು ತುಂಡಾದಾಗ ಅಥವಾ ರಕ್ತಸ್ರಾವ ಆಗುತ್ತಿದ್ದಲ್ಲಿ ದಂತ ಚಿಕಿತ್ಸೆ ಮಾಡಿಸಲೇ ಬೇಕು.

ಯಾವ ಚಿಕಿತ್ಸೆ ಮಾಡಬಾರದು?
ಹಲ್ಲು ಶುಚಿಗೊಳಿಸುವ ಚಿಕಿತ್ಸೆಯನ್ನು ಒಂದೆರಡು ತಿಂಗಳು ಮುಂದೂಡುವುದು ಉತ್ತಮ. ಹಲ್ಲು ಶುಚಿಗೊಳಿಸುವಾಗ ಶಬ್ದಾತೀತವಾದ ಕಿರಣ ಬಳಸಿ ಯಂತ್ರದಿಂದ ಮಾಡುವಾಗ ಕಿರು ಹನಿಗಳು ಸ್ಪಷ್ಟವಾಗಿ ರೋಗ ಹರಡುವ ಸಾಧÀ್ಯತೆ ಹೆಚ್ಚಾಗಿರುತ್ತದೆ. ಹಲ್ಲು ಶುಚಿಗೊಳಿಸುವುದು ತುರ್ತು ಅಗತ್ಯದ ಚಿಕಿತ್ಸೆ ಅಲ್ಲ.
ಹಲ್ಲು ತುಂಬಿಸುವುದು, ಹಲ್ಲು ಬಿಳುಪೀಕರಣ, ಹಲ್ಲು ಕಟ್ಟಿಸುವುದು, ವಿನಿಯರ್ಸ್ ಎಂಬ ಸೌಂದರ್ಯವರ್ಧಕ ಚಿಕಿತ್ಸೆ ಇಂತಹಾ ಎಲ್ಲಾ ಚಿಕಿತ್ಸೆಗಳನ್ನು ಕೋವಿಡ್-19 ದಾಂಧಲೆಯ ಸಂದರ್ಭದಲ್ಲಿ ಮಾಡದಿರುವುದೇ ಉತ್ತಮ.
ರೂಟ್‍ಕೆನಾಲ್ ಥರಪಿ, ವಕ್ರದಂತ ಚಿಕಿತ್ಸೆ ಮುಂತಾದ ಚಿಕಿತ್ಸೆಗಳನ್ನು ಕೂಡಾ ಮುಂದೂಡುವುದು ಉತ್ತಮ. ಅತೀ ಅನಿವಾರ್ಯವೆಂದಲ್ಲಿ ಮಾತ್ರ ಮಾಡಿಸಿ ಒಂದೆರಡು ತಿಂಗಳು ಈ ಚಿಕಿತ್ಸೆ ಮುಂದೂಡುವುದರಿಂದ ಚಿಕಿತ್ಸೆಯ ಪರಿಣಾಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ವೃದ್ದರನ್ನು ಮತ್ತು ಚಿಕ್ಕ ಮಕ್ಕಳನ್ನು ಯಾವುದೇ ರೀತಿಯ ದಂತ ಚಿಕಿತ್ಸೆಗೆ, ದಂತ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಬೇಡಿ. ಅತೀ ಅನಿವಾರ್ಯವಾದರೆ ಮಾತ್ರ ಭೇಟಿ ನೀಡಿ. ವೃದ್ದರಲ್ಲಿ ಕೋವಿಡ್-19 ಹೆಚ್ಚು ತೀವ್ರವಾಗಿ ಕಾಡುವ ಕಾರಣದಿಂದ ದಂತ ಚಿಕಿತ್ಸೆ ಮುಂದೂಡುವುದು ಲೇಸು.

Also Read  ದೇವಸ್ಥಾನ ಹಾಗೂ ದೈವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ

ದಂತ ಚಿಕಿತ್ಸಾಲಯಕ್ಕೆ ಹೋಗುವಾಗ ಏನು ಮುನ್ನೆಚ್ಚರಿಕೆ ವಹಿಸಬೇಕು?
ಪೂರ್ವ ನಿಗಧಿತವಾಗಿ ಫೋನ್ ಮಾಡಿ ಸಮಯ ನಿಗದಿಪಡಿಸಿ ದಂತ ವೈದ್ಯರನ್ನು ಭೇಟಿ ಮಾಡಿ. ಒಂದು ರೋಗಿಗೆ ಕನಿಷ್ಟ ಅರ್ಧ ಗಂಟೆ ಚಿಕಿತ್ಸೆ ನೀಡಲು ಬೇಕಾಗುತ್ತದೆ. ಆ ಬಳಿಕ ಶುಚಿಗೊಳಿಸಲು 15 ನಿಮಿಷ ತಗಲುತ್ತದೆ.
ದಂತ ವೈದ್ಯರ ಬಳಿ ಹೋಗುವಾಗ ಮುಖಕವಚ, ಕನ್ನಡಕ, ಹಾಕಿಕೊಳ್ಳಿ. ಸಾನಿಟೈಸರ್ ಧಾರಾಳವಾಗಿ ಬಳಸಿ ಜಿಪುಣತನ ಬೇಡ.
ದಂತ ಚಿಕಿತ್ಸಾಲಯದ ಕಾಯುವ ಕೊಠಡಿಯಲ್ಲಿ ಸಾಕಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅನಗತ್ಯವಾಗಿ ವಸ್ತುಗಳನ್ನು ಮುಟ್ಟಬೇಡಿ. ಹೆಚ್ಚು ಸಮಯ ಅಲ್ಲಿ ಕುಳಿತುಕೊಳ್ಳಬೇಡಿ. ದಂತ ವೈದ್ಯರ ಬಳಿಗೆ ಹೋಗುವಾಗ ಕನಿಷ್ಟ ಮಂದಿ ಹೋಗಬೇಕು. ಶಾಪಿಂಗ್‍ಗೆ ಹೋಗುವಾಗ ಹತ್ತಾರು ಮಂದಿ ಹೋಗಲೇ ಬೇಡಿ.
ದಂತ ವೈದ್ಯರ ಬಳಿ ಹೋದಾಗ ಒಂದೇ ಭೇಟಿಯಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿ ಈಗ ಸಮಯವಿಲ್ಲ ಮತ್ತೊಮ್ಮೆ ಬರುತ್ತೇನೆ ಎಂಬ ಸಬೂಬು ನೀಡಬೇಡಿ.
ಸಣ್ಣ ಪುಟ್ಟ ಹಲ್ಲು ನೋವುಗಳಿಗೆ ವೈದ್ಯರ ಬಳಿ ಹೋಗುವುದನ್ನು ಈ ಕೋವಿಡ್-19 ಸಂದರ್ಭದಲ್ಲಿ ಅಭ್ಯಾಸ ಮಾಡಬೇಡಿ. ಟೆಲೆಮಿಡಿಸಿನ್, ಮೂಲಕವೂ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಮಿಂಚಂಚೆ ಮತ್ತು ವಾಟ್ಸ್‍ಆಪ್ ಮುಖಾಂತರ ವೈದ್ಯರ ಜೊತೆ ವ್ಯವಹರಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.
ನಿರಂತರ 6 ತಿಂಗಳ ದಂತ ವೈದ್ಯರ ಭೇಟಿಯನ್ನು ಈಗ ತಪ್ಪಿಸಬಹುದು. ಅನಿವಾರ್ಯವಾದಲ್ಲಿ ಮಾತ್ರ ಭೇಟಿ ನೀಡಿ. ದಂತ ಚಿಕಿತ್ಸೆ ಮುಗಿದ ಬಳಿಕ ನೇರವಾಗಿ ಮನೆಗೆ ತೆರಳಬೇಕು. ಅಂಗಡಿ, ಮಾಲ್‍ಗಳು, ದೇವಸ್ಥಾನ ಮಾರುಕಟ್ಟೆ ಹೀಗೆ ಎಲ್ಲೆಡೆ ಹೋಗಬೇಡಿ. ದಂತ ಚಿಕಿತ್ಸಾಲಯದಲ್ಲಿ ವೈರಾಣುಗಳ ಸಾಂದ್ರತೆ ಹೆಚ್ಚು ಇರುವ ಸಾಧ್ಯತೆ ಇರುತ್ತದೆ. ನೇರವಾಗಿ ಮನೆಗೆ ಬಂದು ಬಟ್ಟೆ ಬದಲಿಸಿ ಸ್ನಾನ ಮಾಡುವುದು ಉತ್ತಮ.

Also Read  ಸಿ.ಪಿ.ಸಿ.ಆರ್.ಐ ಗೆ ಭೂಮಿ ಒತ್ತುವರಿ ಸಂಕಟ

ಕೊನೆಮಾತು: ರೋಗ ಹರಡದಂತೆ ತಡೆಯುವ ಸಾಮಾಜಿಕ ಹೊಣೆಗಾರಿಕೆ ವೈದ್ಯರಂತೆ ರೋಗಿಗಳಿಗೂ ಇರುತ್ತದೆ ಎಂಬುದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ.
ಡಾ|| ಮುರಲೀ ಮೋಹನ ಚೂಂತಾರು

error: Content is protected !!
Scroll to Top