(ನ್ಯೂಸ್ ಕಡಬ) newskadaba.com ಉಡುಪಿ,ಜೂ.12: ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ ಬಸ್ಗಳಲ್ಲಿ ನಿಗದಿತ ಸಾಮಾಜಿಕ ಅಂತರ ಪಾಲನೆಯಾಗದ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಬಸ್ಗಳ ವಿರುದ್ಧ ಎಪಿಡಮಿಕ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದ್ದಾರೆ.
ಕೋವಿಡ್ -19 ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ.
ಬಸ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರನ್ನು ಕರೆದೊಯ್ಯುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಂತಹ ಬಸ್ಗಳ ವಿರುದ್ಧ ಸಾರಿಗೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದೆ. ಎಪಿಡಮಿಕ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಈ ಕುರಿತಂತೆ ಸರಕಾರ ನೀಡಿರುವ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ಬಸ್ ಮಾಲಕರಿಗೆ ತಿಳಿಸಿದರು. ಎಲ್ಲ ಬಸ್ಗಳಲ್ಲಿ 30ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸದಂತೆ ತಿಳಿಸಿದ ಅವರು, ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಬಸ್ಗಳಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡುವಂತೆ ಹಾಗೂ ಮಾಸ್ಕ್ ಇಲ್ಲದ ಪ್ರಯಾಣಿಕರಿಗೆ ಬಸ್ನೊಳಗೆ ಪ್ರವೇಶ ನೀಡದಂತೆ ಬಸ್ ಮಾಲಕರಿಗೆ ತಿಳಿಸಿ, ಈ ಬಗ್ಗೆ ತಮ್ಮ ಸಿಬಂದಿಗೆ ನಿರ್ದೇಶನ ನೀಡುವಂತೆ ಖಾಸಗಿ ಬಸ್ ಮಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.