(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.03, ವಿದ್ಯಾರ್ಥಿಗಳ ಕಳಪೆ ಫಲಿತಾಂಶದ ಸಾಧನೆ ಮತ್ತು ಪ್ರವೇಶಾತಿ ಕಡಿಮೆ ಆಗುತ್ತಿರುವ ಕರ್ನಾಟಕದ 20 ಕಾಲೇಜುಗಳು ಸೇರಿದಂತೆ ದೇಶದಲ್ಲಿ ಸುಮಾರು 800 ಎಂಜಿನಿಯರಿಂಗ್ ಕಾಲೇಜುಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಒಳಗಡೆ ಬೀಗ ಬೀಳಲಿದೆ.
ಕಳಪೆ ಗುಣಮಟ್ಟದ ಫಲಿತಾಂಶ ತೋರಿಸುತ್ತಿರುವ ದೇಶದ 800 ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಮುಖ್ಯಸ್ಥ ಅನಿಲ್ ದತ್ತಾತ್ರೇಯ ಸಹಸ್ರಬುದೆ ತಿಳಿಸಿದ್ದಾರೆ.
ಮೂಲಸೌಕರ್ಯದ ಕೊರತೆ ಇರುವ ಹಾಗೂ ಸತತ 5 ವರ್ಷಗಳ ಕಾಲ ಶೇ.30ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿರುವ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ. ಎಐಸಿಟಿಇಯ ಕಠಿಣ ನಿಯಮಗಳಿಂದಾಗಿ ವಾರ್ಷಿಕವಾಗಿ 150ಕ್ಕೂ ಹೆಚ್ಚು ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಅವರು ತಿಳಿಸಿದರು.
2014-15 ರಿಂದ 2017-18ರ ವರೆಗೆ ಭಾರತದಲ್ಲಿ ಒಟ್ಟು 410 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಎಐಸಿಟಿಇ ಅನುಮೋದನೆ ನೀಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಸುಮಾರು 20 ಕಾಲೇಜುಗಳು ಸೇರಿಕೊಂಡಿದೆ.
ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರು ಎಂಟೆಕ್ ಅಥವಾ ಪಿಎಚ್‍ಡಿ ಪದವಿ ಪಡೆದಿದ್ದರೂ ಆಧುನಿಕ ಶಿಕ್ಷಣದ ತರಬೇತಿ ಹೊಂದಿಲ್ಲದ ಕಾರಣ ಉತ್ತಮ ವಿದ್ಯಾರ್ಥಿಗಳು ತಯಾರಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಲೇಜುಗಳಿಗೆ ಉಪನ್ಯಾಸಕರಾಗಿ ಸೇರ್ಪಡೆಯಾಗುವವರು ಕಡ್ಡಾಯವಾಗಿ 6 ತಿಂಗಳ ವಿಶೇಷ ತರಬೇತಿ ಪಡೆಯಬೇಕಾಗುತ್ತದೆ. ಅಷ್ಟೇ ಅಲ್ಲದೇ ಈಗಾಗಲೇ ಉಪನ್ಯಾಸಕ ವೃತ್ತಿಯಲ್ಲಿರುವವರು ಈ ವಿಶೇಷ ತರಬೇತಿಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.
ಎಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ಕಡಿಮೆ ಆದಲ್ಲಿ ಅವುಗಳನ್ನು ಕಲಾ, ವಿಜ್ಞಾನ ಅಥವಾ ಪಾಲಿಟೆಕ್ನಿಕ್ ಕಾಲೇಜುಗಳಾಗಿ ರೂಪಿಸಲಾಗುತ್ತದೆ. ಉದ್ಯಮಕ್ಕೆ ತಯಾರಾಗಿರುವ ವಿದ್ಯಾರ್ಥಿಗಳನ್ನು ಎಐಸಿಟಿಇ ನಿರೀಕ್ಷಿಸುತ್ತಿದೆ. ಈ ಕಾರಣಕ್ಕೆ ಈ ವರ್ಷದಿಂದಲೇ ಎರಡು ಮತ್ತು ಮೂರನೇ ವರ್ಷದಲ್ಲಿ ಇಂಟರ್ನ್ ಶಿಪ್ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಕ್ಯಾಂಪಸ್ ಸಂದರ್ಶನ ನಡೆಯುವ ಮೊದಲೇ ವಿದ್ಯಾರ್ಥಿಗಳು ಉದ್ಯೋಗ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.