(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜೂ 05: ಜೂನ್ 8ರಿಂದ ರಾಜ್ಯಾದ್ಯಂತ ಭಕ್ತರಿಗಾಗಿ ದೇವಾಲಯಗಳು ತೆರೆಯಲಿವೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ಅತಿ ಶ್ರೀಮಂತ ದೇವಸ್ಥಾನವೆಂದು ಗುರುತಿಸಲ್ಪಟ್ಟಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಪ್ರತೀ ವರ್ಷ ಆಗಮಿಸುತ್ತಾರೆ. ಕಳೆದ ಹತ್ತಾರು ವರ್ಷಗಳಿಂದ ಸತತವಾಗಿ ಅತ್ಯಂತ ಹೆಚ್ಚಿನ ಅದಾಯ ಪಡೆದ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಪ್ರತೀ ವರ್ಷ 90 ಕೋಟಿ ಸರಾಸರಿ ಆದಾಯ ಗಳಿಸಿದೆ.
ಆದರೆ, ಕೊರೋನಾ ಲಾಕ್ಡೌನ್ ಬಳಿಕ ಕಳೆದ ಸರಿ ಸುಮಾರು 3 ತಿಂಗಳಿನಿಂದ ದೇವಸ್ಥಾನ ಭಕ್ತರ ಪ್ರವೇಶಕ್ಕೆ ಮುಚ್ಚಿದ್ದು, ಕ್ಷೇತ್ರದ ಆದಾಯಕ್ಕೂ ಇದು ಹೊಡೆತ ನೀಡಿದೆ. ಇದೀಗ ಮತ್ತೆ ಜೂನ್ 8ರಿಂದ ದೇವಸ್ಥಾನವು ಭಕ್ತದ ದರ್ಶನಕ್ಕೆ ತೆರೆಯಲಿದ್ದು, ಈ ಸಂಬಂಧ ಸರ್ಕಾರ ಸೂಚಿಸಿದ ಎಲ್ಲಾ ಮಾರ್ಗಸೂಚಿಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹೊರಾಂಗಣದಲ್ಲಿ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತೀ ಒಂದು ಮೀಟರ್ ಅಂತರವನ್ನು ನಿಗದಿ ಮಾಡಲಾಗಿದೆ. ಪೇಂಟ್ನಿಂದ ಅಂತರದ ಚೌಕಟ್ಟುಗಳನ್ನೂ ರಚಿಸಲಾಗಿದ್ದು, ದೇವಸ್ಥಾನದ ಒಳಗೆ ಬರುವ ಎಲ್ಲಾ ಭಕ್ತರೂ ಕಡ್ಡಾಯವಾಗಿ ತಮ್ಮ ಕೈ-ಕಾಲುಗಳನ್ನು ಶುಚಿಗೊಳಿಸಿದ ಬಳಕ ದೇವಸ್ಥಾನದ ಮುಖ್ಯದ್ವಾರದ ಬಳಿ ಇಡಲಾಗುವ ಸ್ಯಾನಿಟೈಸರ್ ಬಳಸಬೇಕಿದೆ. ಅಲ್ಲದೆ , ಕ್ಷೇತ್ರದ ಒಳಗೆ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆಯೂ ಸೂಚಿಸಲಾಗಿದೆ.
ಸೋಮವಾರದಿಂದ ಭಕ್ತರಿಗೆ ಸುಬ್ರಹ್ಮಣ್ಯ ನ ದರ್ಶನ ಭಾಗ್ಯ ಲಭಿಸಲಿದೆ. ಆದಿ ಸುಬ್ರಹ್ಮಣ್ಯದಲ್ಲೂ ಇದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆಯೂ ನೋಡಿಕೊಳ್ಳಲಾಗುತ್ತದೆ. ಆದರೆ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ತೀರ್ಥ ಪ್ರಸಾದಗಳನ್ನು ನೀಡುವ ವ್ಯವಸ್ಥೆಯನ್ನು ಕೈ ಬಿಡಲಾಗಿದ್ದು, ಕೊರೋನಾ ಮರೆಯಾದ ಬಳಿಕ ಕ್ಷೇತ್ರದಲ್ಲಿ ಮತ್ತೆ ಹಿಂದಿನದೇ ವ್ಯವಸ್ಥೆ ಪುನರಾರಂಭಗೊಳ್ಳಲಿದೆ. 3 ತಿಂಗಳ ಬಳಿಕ ಭಕ್ತರ ದರ್ಶನಕ್ಕಾಗಿ ದೇವಸ್ಥಾನಗಳನ್ನು ತೆರೆಯಲಾಗುತ್ತಿದೆ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು ,ಕ್ಷೇತ್ರದಲ್ಲಿ ನಡೆಯುವ ಯಾವ ಸೇವೆಗಳಿಗೂ ಅವಕಾಶ ನೀಡಲಾಗಿಲ್ಲ. ಕುಕ್ಕೆ ಸುಬ್ರಹ್ಮಣ್ಯ ಸರ್ಪ ಸಂಸ್ಕಾರ ಸೇವೆ ಹಾಗೂ ಆಶ್ಲೇಷ ಬಲಿ ಪೂಜೆಗೆ ಹೆಸರುವಾಸಿಯಾಗಿದ್ದು,ಈ ಸೇವೆಗಳೂ ನಡೆಯುವುದಿಲ್ಲ. ಅಲ್ಲದೆ ಛತ್ರ ವ್ಯವಸ್ಥೆಯನ್ನೂ ಸಂಪೂರ್ಣ ನಿಷೇಧಿಸಲಾಗಿದ್ದು, ದೇವರ ದರ್ಶನ ಮಾಡಿ ತೆರಳಲು ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.