ಕಚ್ಚಿದ ಹೆಬ್ಬಾವು ಜೊತೆ ಉಡುಪಿಯ ಆಸ್ಪತ್ರೆಗೆ ಬಂದು ದಾಖಲಾದ ► ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್!

(ನ್ಯೂಸ್ ಕಡಬ) newskadaba.com ಉಡುಪಿ,ಸೆ.02, ಹೆಬ್ಬಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯೋರ್ವರು ಹೆಬ್ಬಾವಿನ ಜೊತೆಗೇ ಆಸ್ಪತ್ರೆಗೆ ಬಂದ ಘಟನೆ ಕುಂದಾಪುರ ತಾಲೂಕಿನಲ್ಲಿ ತಲ್ಲೂರಿನ ಕೋಟೆಬಾಗಿಲು ಎಂಬಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿಯ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಹಿಡಿಯಲು ಯತ್ನಿಸಿದ್ದರು. ಈ ಸಂದರ್ಭ ಹೆಬ್ಬಾವು ಅವರ ಬಲಗೈಗೆ ಕಚ್ಚಿದ್ದು, ಅದೇ ಹಾವಿನ ಸಮೇತ ಜೋಸೆಫ್ ಆಸ್ಪತ್ರೆಗೆ ತೆರಳಿ ವೈದ್ಯರ ಮುಂದೆ ಬಂದಿದ್ದಾರೆ.

ಪಾರ್ತಿಕಟ್ಟೆಯ ನಿವಾಸಿಯೋರ್ವರ ಮನೆಯ ಹಿತ್ತಲ ಪೊದೆಯಲ್ಲಿ ಅವಿತ್ತಿದ್ದ ಹಾವನ್ನು ಹಿಡಿಯಲು ಮುಂದಾಗಿದ್ದ ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ರವರು ಪೊದೆಗಳನ್ನು ಬಿಡಿಸುತ್ತಿರುವಾಗ ಬೆದರಿದ ಹಾವು ಸ್ನೇಕ್ ಮಾಸ್ಟರ್ ಜೋಸೆಫ್ ಅವರ ಬಲಗೈಗೆ ಕಚ್ಚಿದೆ.

Also Read  ಕಡಬದ KSWS ಸಂಸ್ಥೆಯಲ್ಲಿ ಹಲವು ಉದ್ಯೋಗಗಳು - ಪದವೀಧರರಿಂದ ಅರ್ಜಿ ಆಹ್ವಾನ

ಕಚ್ಚಿದ ತಕ್ಷಣ ಶಾಕ್ ಆದ ಜೋಸೆಫ್ ರವರು ತಡಮಾಡದೆ ಕೈಗೊಂದು ಬಟ್ಟೆ ಕಟ್ಟಿಕೊಂಡು ಹಾವನ್ನು ಹಿಡಿದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಹಾವಿನ ಜೊತೆಗೆ ಕುಂದಾಪುರ ಆಸ್ಪತ್ರೆಗೆ ಧಾವಿಸಿದರು. ವೈದ್ಯರು ಚಿಕಿತ್ಸೆ ನೀಡಿದ ನಂತರ ಜೋಸೆಫ್ ಮನೆಗೆ ವಾಪಾಸ್ಸಾಗಿದ್ದಾರೆ.

ಕೆಲವು ವರ್ಷಗಳಿಂದ ಹೆಮ್ಮಾಡಿಯಲ್ಲಿ ರಿಕ್ಷಾ ಚಾಲನೆ ವೃತ್ತಿಯ ಜೊತೆಗೆ ಹಾವು ಹಿಡಿಯುವ ಕಲೆ ಕರಗತ ಮಾಡಿಕೊಂಡಿದ್ದ ಜೋಸೆಫ್, ತಾಲೂಕಿನಲ್ಲಿ 2 ಸಾವಿರಕ್ಕೂ ಮಿಕ್ಕಿ ವಿಷಪೂರಿತ ಹಾವುಗಳನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

 

error: Content is protected !!
Scroll to Top