(ನ್ಯೂಸ್ ಕಡಬ) newskadaba.com ಉಡುಪಿ,ಜೂ.03: ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ವೊಂದು ಗೋವಾ ಸಮೀಪ ಮುಳುಗಡೆಯಾಗಿದ್ದು, ಬೋಟ್ನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಇನ್ನು ಮುಳುಗಡೆಯಾಗಿರುವ ಬೋಟ್ನ್ನು ಮಲ್ಪೆ ವಡಭಾಂಡೇಶ್ವರದ ದೀಪಿಕಾ ಅವರ ಮಾಲೀಕತ್ವದ ಶ್ರೀ ದುರ್ಗಾ ಹನುಮ ಆಳ ಸಮುದ್ರ ಬೋಟ್ ಎಂದು ಹೇಳಲಾಗಿದೆ. ಈ ಬೋಟ್ ಮೇ 23ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಮಹಾರಾಷ್ಟ್ರದಲ್ಲಿ ಮೀನುಗಾರಿಕೆ ಮುಗಿಸಿ ಹಿಂತಿರುಗಿ ಬರುವಾಗ ಗೋವಾ ಸಮೀಪದ ರೆಡ್ಹೌಸ್ ಬಳಿ ಸುಮಾರು 27 ನಾಟಿಕಲ್ ಮೈಲು ದೂರದಲ್ಲಿರುವಾಗ ಗಾಳಿಯ ರಭಸಕ್ಕೆ ಬೋಟಿನ ಫೈಬರ್ ಒಡೆದು ನೀರು ಬೋಟಿನ ಒಳ ಸೇರಿದೆ. ಇದರಿಂದಾಗಿ ಬೋಟ್ ಮುಳುಗಡೆಯಾಗಿದ್ದು, ಮೀನುಗಾರರು ತಕ್ಷಣ ಬೇರೆ ಬೋಟ್ನವರಿಗೆ ಮಾಹಿತಿ ನೀಡಿದ್ದರು.
ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಾದ ಕೇಶವ ಮಾದೇವ ಮೊಗೇರ, ನಾಗರಾಜ್ ಈಶ್ವರ ಮೊಗೇರ, ರಾಮಚಂದ್ರ ನಾರಾಯಣ ನಾಯ್ಕ್, ಈಶ್ವರ ವೆಂಕಟರಮಣ ಹರಿಕಾಂತ್ರ, ದಿನೇಶ್ ಜಟ್ಟ ಮೊಗೇರ, ಗುರುರಾಜ್ ಮಂಜುನಾಥ ಮೊಗೇರ, ಚಿದಂಬರ ಗಣಪತಿ ಹರಿಕಾಂತ್ರ ಅವರನ್ನು ಸಮೀಪದಲ್ಲಿದ್ದ ಶಿವಬೈರವ ಬೋಟ್ನಲ್ಲಿದ್ದ ಮೀನುಗಾರರು ರಕ್ಷಿಸಿ ದಡ ಸೇರಿಸಿದ್ದಾರೆ. ಬೋಟ್ನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಮೀನು, ಡೀಸೆಲ್ ಸಮುದ್ರ ಪಾಲಾಗಿದೆ. ಸುಮಾರು 60 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.