(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.01., ಮಾಹಾಮಾರಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಕರ್ನಾಟಕ – ಕೇರಳ ಗಡಿಭಾಗದ ರಸ್ತೆಗಳನ್ನು ತೆರೆಯುವ ಲಕ್ಷಣ ಸದ್ಯಕ್ಕಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಮಾಹಿತಿ ನೀಡಿದ್ದಾರೆ .
ಅಂತಾರಾಜ್ಯ ಗಡಿ ತೆರೆಯುವ ನಿರ್ಧಾರವನ್ನು ತೆಗೆದುಕೊಳ್ಳಲು ಆಯಾ ರಾಜ್ಯಗಳಿಗೆ ಕೇಂದ್ರ ಸರಕಾರ ಬಿಟ್ಟಿದ್ದು, ಕಾಸರಗೋಡು – ಮಂಗಳೂರು ಗಡಿಭಾಗ ತಲಪಾಡಿ ಟೋಲ್ ಗೇಟ್ ಓಪನ್ ಮಾಡುವ ಕುರಿತು ಇನ್ನೂ ನಿರ್ಧರಿಸಿಲ್ಲ ಜೂನ್ 8ರ ಬಳಿಕವೇ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಮಾಹಿತಿ ನೀಡಿದ್ದಾರೆ.
ಕಾಸರಗೋಡಿನ ಜನರು ಹೆಚ್ಚಾಗಿ ಮಂಗಳೂರನ್ನು ಆಶ್ರಯಿಸಿದ್ದು ದಿನಂಪ್ರತಿ ಸಾವಿರಾರು ಮಂದಿ ಉದ್ಯೋಗಕ್ಕೆ ಮಂಗಳೂರಿಗೆ ಬಂದು ಹೋಗುತ್ತಿದ್ದರು. ಆದರೆ ಲಾಕ್ ಡೌನ್ ಆದ ಬಳಿಕ ಕಳೆದ ಮೂರು ತಿಂಗಳಲ್ಲಿ ಕಾಸರಗೋಡಿನ ಜನರು ಕರ್ನಾಟಕ ಪ್ರವೇಶ ಸಾಧ್ಯವಾಗದೆ ಕಂಗಾಲಾಗಿತ್ತು. ಅಷ್ಟೇ ಅಲ್ಲದೇ ಕಾಸರಗೋಡು ಮತ್ತು ಮಂಗಳೂರಿನ ಹಲವು ಸಂಘಟನೆಗಳು ಈ ಬಗ್ಗೆ ಆಯಾ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿ, ಗಡಿ ತೆರೆಯುವಂತೆ ಒತ್ತಡವನ್ನೂ ಹಾಕಿತ್ತು. ಆದರೆ, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸದ್ಯ ದಿನೇದಿನೇ ಹೆಚ್ಚುತ್ತಿರುವ ಕೊರೊನಾ ರೋಗಿಗಳ ಸಂಖ್ಯೆಯಿಂದಾಗಿ ಗಡಿ ತೆರೆಯುವ ಪ್ರಸ್ತಾಪವನ್ನು ಮುಂದಕ್ಕೆ ಹಾಕಲಾಗಿದೆ.
ಅತ್ತ ಕೇರಳ ಸರಕಾರವೂ ಗಡಿ ಓಪನ್ ಮಾಡಲು ಹಿಂದೇಟು ಹಾಕಿದ್ದು, ಇದೇ ವೇಳೆ, ಕರ್ನಾಟಕ ಸರಕಾರ ಸೇವಾ ಸಿಂಧು ಆ್ಯಪ್ ನಲ್ಲಿ ನೋಂದಾಯಿಸಿದವರಿಗೆ ಪಾಸ್ ಸಿಗದಿದ್ದರೂ ಕೇರಳ ಪ್ರವೇಶಕ್ಕೆ ಅನುಮತಿ ನೀಡಿದೆ. ಆದರೆ, 14 ದಿನ ಕ್ವಾರಂಟೈನ್ ಮಾಡಲೇಬೇಕು. ನೋಂದಣಿ ಆಗಿ ಪಾಸ್ ಸಿಗದೆ ಉಳಿದಿದ್ದವರಿಗೆ ಪ್ರವೇಶ ನೀಡಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಸಿಂಧು ಮಾಹಿತಿ ನೀಡಿದ್ದಾರೆ.