(ನ್ಯೂಸ್ ಕಡಬ) newskadaba.com ಕಡಬ,ಸೆ.02, ಪುತ್ತೂರು ತಾಲೂಕಿನ ಕೊಣಾಜೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಅದೇ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಥಳಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೊಣಾಜೆ ಗ್ರಾಮದ ಮುಚ್ಚುರೋಡಿ ಗಿರೀಶ್ ಎಂಬವರ ಪುತ್ರ ಚೇತನ್ ಎಂಬ ಏಳನೇ ತರಗತಿಯ ವಿದ್ಯಾರ್ಥಿಗೆ ಅದೇ ಶಾಲಾ ಶಿಕ್ಷಕ ಅಜಿತ್ ಕುಮಾರ್ ಜೈನ್ ಎಂಬವರು ಗುರುವಾರ ಮರದ ಅಡಿಕೋಲು ಹಾಗೂ ಕೈಯಿಂದ ಥಳಿಸಿರುವುದಾಗಿ ಹೇಳಲಾಗಿದೆ. ಅಡಿಕೋಲಿನಿಂದ ತಲೆಗೆ ಎರಡು ಮೂರು ಕಡೆ ಹಲ್ಲೆ ನಡೆಸಿದ್ದು ಬಾಸುಂಡೆ ಬಂದಿದೆ, ಮಾತ್ರವಲ್ಲ ಬೆನ್ನು ಹಾಗೂ ಕೈಕಾಲುಗಳಲ್ಲೂ ಬಾಸುಂಡೆ ಬರುವ ರೀತಿಯಲ್ಲಿ ಅಮಾನುಷವಾಗಿ ಥಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಾಲೆಯಲ್ಲಿ ಮಕ್ಕಳ ಮೇಲೆ ವಿನಾಕಾರಣ ಥಳಿಸಿದಾಗ ಇತರ ವಿದ್ಯಾರ್ಥಿಗಳನ್ನು ಇದನ್ನು ತಡೆಯಲು ಹೋದಾಗ ಅವರಿಗೆ ಶಿಕ್ಷಕ ಥಳಿಸಿದ್ದಾರೆ ಎಂದು ದೂರಲಾಗಿದೆ. ಈ ಶಿಕ್ಷಕರು ಈ ಹಿಂದೆ ಕೂಡಾ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇವರು ಸುಳ್ಯದ ಶಾಲೆಯೊಂದರಿಂದ ಇದೇ ಕಾರಣಕ್ಕೆ ಶಿಕ್ಷಾವರ್ಗಾವಣೆಗೊಂಡು ಕೋಣಾಜೆ ಶಾಲೆಗೆ ವರ್ಗಾವಣೆಗೊಂಡಿದ್ದರು, ಶಿಕ್ಷಕರ ಈ ವರ್ತನೆಯಿಂದ ಅಕ್ರೋಶಗೊಂಡಿರುವ ಪೋಷಕರು ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ಕೋಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶೋಧರ ಗೌಡ ಕೋಣಾಜೆ ತಿಳಿಸಿದ್ದಾರೆ. ಪ್ರಕರಣದ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.