(ನ್ಯೂಸ್ ಕಡಬ) newskadaba.com ಕಡಬ,ಸೆ.02, ಪುತ್ತೂರು ತಾಲೂಕಿನ ದೋಳ್ಪಾಡಿ ಗ್ರಾಮದ ಇಡ್ಯಡ್ಕ ಎಂಬಲ್ಲಿ ರಬ್ಬರ್ ಕಾರ್ಮಿಕನೋರ್ವ ಶೌಚಾಲಯದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

ಮೃತಪಟ್ಟವರನ್ನು ಸುಳ್ಯ ತಾಲೂಕಿನ ಕಂದಡ್ಕ ಪೆರಿಯಾಲ್ ಎಂಬವರ ಪುತ್ರ ಸೆಲ್ವರಾಜ್ ಎಂದು ಗುರುತಿಸಲಾಗಿದೆ. ಇವರು ಇಡ್ಯಡ್ಕ ತಿಮ್ಮಪ್ಪ ಗೌಡರ ರಬ್ಬರ ತೋಟದಲ್ಲಿ ಟ್ಯಾಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಸೆಲ್ವರಾಜ್ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಇಲ್ಲಿಗೆ ಕೆಲಸಕ್ಕೆ ಸೇರಿದ್ದರು. ಹತ್ತು ದಿನಗಳ ಹಿಂದೆ ಮನೆಗೆ ಹೋಗಿ ಬಂದಿದ್ದರು. ಎರಡು ದಿನಗಳ ಹಿಂದೆ ತನ್ನ ಅಣ್ಣನ ಪತ್ನಿಯೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ತನಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿಕೊಂಡಿದ್ದರು. ಆದರೂ ಗುರುವಾರ ಕೆಲಸ ಮಾಡಿ ಸಂಬಳ ಪಡೆದುಕೊಂಡಿದ್ದರು. ತಿಮ್ಮಪ್ಪ ಗೌಡರ ಕೊಟ್ಟಿಗೆಯಲ್ಲಿ ವಾಸವಾಗಿದ್ದ ಅವರು ಶುಕ್ರವಾರ ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ಗೆ ಹೋಗಿರಬಹುದೆಂದು ಅಂದುಕೊಂಡಿದ್ದರು. ಮಧ್ಯಾಹ್ನದ ವೇಳೆಗೆ ಕೂಡಾ ಮನೆಗೆ ಬಂದಿರದ ಕಾರಣ ರಬ್ಬರ ತೋಟದಲ್ಲಿ ಹುಡುಕಾಟದಲ್ಲಿ ತೊಡಗಿದ ಮನೆಯವರು ಹಾಗೂ ಸ್ಥಳೀಯರು ಬಳಿಕ ಮನೆಯ ಕಡೆ ಬಂದರು. ಕೊಟ್ಟಿಗೆಯ ಹತ್ತಿರದ ಶೌಚಾಲಯಕ್ಕೆ ಚಿಲಕ ಹಾಕಿರುವುದನ್ನು ಕಂಡು ಕಿಟಕಿಯಲ್ಲಿ ನೋಡಿದಾಗ ಕುಸಿದ್ದು ಬಿದ್ದಿರುವುದು ಬೆಳಕಿಗೆ ಬಂದಿತ್ತು, ಅಷ್ಟರಲ್ಲಿ ಸೆಲ್ವರಾಜ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೃತರ ಪತ್ನಿ ಕೃಷ್ಣವೇಣಿ ನೀಡಿದ ದೂರಿನಂತೆ ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








