(ನ್ಯೂಸ್ ಕಡಬ) newskadaba.com ಕಡಬ, ಮೇ.28. ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧೋನಿ ನಿವೃತ್ತಿ ನೀಡಿದ್ದಾರೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಇದ್ದಕ್ಕಿದ್ದಂತೆ ಟ್ವಿಟರ್ನಲ್ಲಿಹರಿದಾಡುತ್ತಿತ್ತು.
ಅಂದಹಾಗೆ ಧೋನಿ ನಿಜಕ್ಕೂ ನಿವೃತ್ತಿ ಘೋಷಿಸಿಬಿಟ್ಟರೆ? ಎಂಬ ಆತಂಕದಿಂದ ಧೋನಿ ಅಭಿಮಾನಿಗಳು ಚಿಂತೆಗೊಳಗಾದರೆ ಅದು ಕ್ಷಣಮಾತ್ರದಲ್ಲಿ ಸುಳ್ಳೆಂದು ತಿಳಿದಾಗ ನಿಟ್ಟುಸಿರು ಬಿಟ್ಟರು. ಧೋನಿ ನಿವೃತ್ತಿ ವಿಚಾರ ಟ್ರೆಂಡ್ ಆಗಲು ವರದಿ ಒಂದು ಕಾರಣವಾಗಿದೆ. ಸ್ಪೋರ್ಟ್ಸ್ಕೀಡಾದ ವರದಿ ಒಂದರಲ್ಲಿ “ಧೋನಿ ನಿವೃತ್ತಿ ಅಂತಿಮವಾಗಿದ್ದು, ಅವರು ಈ ಬಗ್ಗೆ ತಮ್ಮ ಆತ್ಮೀಯ ಗೆಳೆಯರೊಟ್ಟಿಗೆ ಹೇಳಿಕೊಂಡಿದ್ದಾರೆ. ಬಿಸಿಸಿಐ ಜೊತೆಗೆ ಮಾತುಕತೆ ನಡೆಸಿದ ಬಳಿಕ ಈ ವಿಚಾರವನ್ನು ಅಧಿಕೃತವಾಗಿ ಬಹಿರಂಗ ಪಡಿಸಲಾಗುವುದು,” ಎಂದು ಸ್ಪೋರ್ಟ್ಸ್ಕೀಡಾ ವರದಿ ಮಾಡಿದ್ದು ಸೋಷಿಯಲ್ ಮೀಡಿಯಾ ಟ್ರೆಂಡ್ ಆಗಲು ಕಾರಣ.
ಇನ್ನು ಕಳೆದ ವರ್ಷ ಇಂಗ್ಲೆಂಡ್‍ನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಬಳಿಕ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಸೆಮಿಫೈನಲ್ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅಚ್ಚರಿಯ ಸೋಲುಂಡ ಬಳಿಕ ಧೋನಿ ಕ್ರಿಕೆಟ್ನಿಂದ ಅನಿರ್ಧಿಷ್ಟ ಅವಧಿಯ ಕಾಲ ವಿಶ್ರಾಂತಿ ಮೊರೆ ಹೋದರು.
ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಐಪಿಎಲ್ 2020 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಧೋನಿ ಎದುರು ನೋಡುತ್ತಿದ್ದರು. ಇದರೊಂದಿಗೆ ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಮಾಹಿ ಲೆಕ್ಕಾಚಾರವಾಗಿತ್ತು. ಆದರೆ ಕೊರೊನಾದಿಂದಾಗಿ ಐಪಿಎಲ್ ನಡೆಯದೇ ಇದ್ದರೆ ಈ ವರ್ಷ ಧೋನಿಯ ಅಂತಾರಾಷ್ಟ್ರೀಯ ವೃತ್ತಿ ಬದುಕು ಅಂತ್ಯಗೊಂಡಂತೆ ಎಂದೇ ಕ್ರಿಕೆಟ್ ಪಂಡಿತರು ಹೇಳಿದ್ದಾರೆ. ಆದರೆ ಮಾಹಿ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.