ರಾಮಕುಂಜ ಗ್ರಾಮ ಪಂಚಾಯತ್ ► “ಗಾಂಧಿ ಗ್ರಾಮ ಪುರಸ್ಕಾರ”

(ನ್ಯೂಸ್ ಕಡಬ) newskadaba.com ಕಡಬ,ಸೆ.02, ವಿಶ್ವಮಾನ್ಯ ಪೇಜಾವರ ಶ್ರೀಗಳ ಹುಟ್ಟೂರಾದ ರಾಮಕುಂಜದ ಗ್ರಾಮ ಪಂಚಾಯತಿಗೆ ರಾಜ್ಯ ಸರಕಾರದಿಂದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ.

ಗ್ರಾಮಗಳ ನೈರ್ಮಲ್ಯ ಮತ್ತು ಸಮಗ್ರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಗ್ರಾಮ ಪಂಚಾಯತಿಗಳ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಕರ್ನಾಟಕ ಸರಕಾರದಿಂದ ಗಾಂಧಿ ಜಯಂತಿ ಪ್ರಯುಕ್ತ ನೀಡುವ 2016-17 ನೇ ಸಾಲಿನ “ಗಾಂಧಿ ಗ್ರಾಮ ಪುರಸ್ಕಾರ”ಕ್ಕೆ ಕಳೆದ ವರ್ಷದಂತೆ ಈ ಬಾರಿ ಕೂಡ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಗ್ರಾ.ಪಂ ಗೆ ಗಾಂಧಿ ಪುರಸ್ಕಾರ ಸಿಗಲಿದ್ದು, ಒಟ್ಟು 5 ಗ್ರಾಮ ಪಂಚಾಯತುಗಳು ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಈ ಪೈಕಿ ರಾಮಕುಂಜ ಒಂದಾಗಿದ್ದು ಬೆಂಗಳೂರು ವಿಧಾನ ಸೌಧದ ಬ್ಯಾಕೆಂಟ್ ಹಾಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪುರಸ್ಕಾರ ಫಲಕ ಹಾಗೂ 5 ಲಕ್ಷ ರುಪಾಯಿ ಚೆಕ್ ಪಡೆಯಲು ಆಯ್ಕೆಯಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತು ರಾಜ್ ಇಲಾಖೆಯು ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುವ ಗ್ರಾಮಪಂಚಾಯತಿಗಳನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತಿದೆ. ಪುರಸ್ಕಾರಕ್ಕೆ ಎಲ್ಲಾ ಪಂಚಾಯಿತಿಗಳು ಅರ್ಜಿ ಸಲ್ಲಿಸಲು ಅವಕಾಶ ಕೋರಲಾಗಿತ್ತು. ಬಂದ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅವುಗಳಲ್ಲಿ ಉತ್ತಮವಾಗಿರುವ ಪಂಚಾಯತುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಪುತ್ತೂರು ತಾಲೂಕಿನಿಂದ ಬನ್ನೂರು, ಕುಟ್ರುಪ್ಪಾಡಿ ಮತ್ತು ರಾಮಕುಂಜ, ಬಂಟ್ವಾಳ ತಾಲೂಕಿನಿಂದ ಪುಣಚ, ಅಮ್ಮುಂಜೆ ಮತ್ತು ಸಂಗಬೆಟ್ಟು ಗ್ರಾಮ ಪಂಚಾಯತುಗಳು ಮೊದಲ ಹಂತದಲ್ಲಿ ಆಯ್ಕೆಯಾಗಿದ್ದವು. ಇದರಲ್ಲಿ ಅಂತಿಮ ಹಂತವಾಗಿ ಪುತ್ತೂರು ತಾಲೂಕಿನಿಂದ ರಾಮಕುಂಜ ಹಾಗೂ ಬಂಟ್ವಾಳದಿಂದ ಸಂಗಬೆಟ್ಟು, ಸುಳ್ಯದಿಂದ ಐವರ್ನಾಡು, ಬೆಳ್ತಂಗಡಿಯಿಂದ ಕೂವೆಟ್ಟು ಮತ್ತು ಮಂಗಳೂರಿನಿಂದ ಪಡುಪಣಂಬೂರು ಗ್ರಾಮ ಪಂಚಾಯತುಗಳು ಪುರಸ್ಕಾರಕ್ಕೆ ಭಾಜನವಾಗಿವೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡುವ ಮುನ್ನ ಆಯಾ ಗ್ರಾಪಂಗಳ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ಸ್ವಚ್ಛತೆ, ತಿಪ್ಪೆಗುಂಡಿಗಳ ತೆರವು, ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ,ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಒಟ್ಟಾರೆ ನೈರ್ಮಲ್ಯ ಮತ್ತು ಸಮಗ್ರ ಸ್ವಚ್ಚತೆಗೆ ಒತ್ತು ನೀಡಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತದೆ. ಇದರೊಂದಿಗೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವೈಯುಕ್ತಿಕ ಶೌಚಾಲಯಗಳ ನಿರ್ಮಾಣ, ಗ್ರಾಮೀಣ ಜನರಿಗೆ ಒದಗಿಸಲಾಗಿರುವ ರಸ್ತೆ, ಸೇತುವೆ, ಶುದ್ಧ ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಮೂಲ ಸೌಕರ್ಯಗಳು, ಮಹಾತ್ಮಗಾಂಧಿ ರಾಷ್ಟ್ರೀಯ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒದಗಿಸಲಾಗಿರುವ ಪ್ರತಿಶತ ಉದ್ಯೋಗಗಳು, ಅನುದಾನ ವಿನಿಯೋಗ, ವಸತಿ ಯೋಜನೆಗಳ ಅಡಿಯಲ್ಲಿ ವಸತಿ ರಹಿತರಿಗೆ ಕೊಟ್ಟಿರುವ ಮನೆ, ಚರಂಡಿಗಳ ನಿರ್ಮಾಣ, ಸಮರ್ಪಕ ನಿರ್ವಹಣೆ, ಗ್ರಾಮಗಳ ಒಳಭಾಗಗಳಲ್ಲಿರುವ ತಿಪ್ಪೆಗಳ ಸ್ಥಳಾಂತರ, ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಕೂಡ ಪರಿಗಣಿಸಲಾಗುತ್ತದೆ. ಇದಲ್ಲದೆ ಶಾಸನಬದ್ಧ ಅನುದಾನಗಳ ನಿಯಾಮಾನುಸಾರ ವಿನಿಯೋಗ, ಸರಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಲೆಕ್ಕಪತ್ರಗಳ ನಿರ್ವಹಣೆ, ವಾರ್ಷಿಕ ಲೆಕ್ಕಪರಿಶೋಧನೆ, ಪ್ರಸಕ್ತ ಸಾಲಿನ ಮಾಸಿಕ ಸಭೆಗಳ ನಡಾವಳಿಗಳನ್ನು ದಾಖಲು ಮಾಡಿರುವುದು, ಬೀದಿ ದೀದ,ಕುಡಿಯುವ ನೀರಿನ ಬಿಲ್ ಪಾವತಿ, ಸ್ಥಾಯಿ ಸಮಿತಿಗಳ ರಚನೆ ಸೇರಿದಂತೆ ಎಲ್ಲಾ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

Also Read  ಪುತ್ತೂರು: ಕಾರು, ಟಿಪ್ಪರ್ ಮುಖಾಮುಖಿ ಡಿಕ್ಕಿ ➤ ಏರ್ ಬಲೂನ್ ನಿಂದ ಕಾರು ಚಾಲಕ ಪಾರು..!!!

ತೆರಿಗೆ ಸಂಗ್ರಹ, ಪ.ಜಾತಿ, ಪಂಗಡ ಹಾಗೂ ವಿಶಿಷ್ಟ ಚೇತನರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿರುವುದು, ಸಕಾಲ ಸೇವೆಗಳು, ಆರ್ಟಿಐ ಮಾಹಿತಿಗಳು ಸೇರಿದಂತೆ ಪಂಚಾಯತಿನಿಂದ ಲಭ್ಯವಾಗುವ ಇತರ ಮಾಹಿತಿಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸಿರುವುದು ಮತ್ತು ಈ ಎಲ್ಲಾ ಮಾಹಿತಿಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಸಮಗ್ರವಾಗಿ ದಾಖಲು ಮಾಡಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತದೆ. ವಾರ್ಷಿಕ ಕ್ರಿಯಾ ಯೋಜನೆಗಳ ಬಗ್ಗೆ ಗ್ರಾ.ಪಂನ ಗೋಡೆಗಳ ಮೇಲೆ ಬರೆಸುವುದು, ಎಲ್ಲಾ ಆಸ್ತಿ ವಿವರಗಳನ್ನು ದಾಖಲಿಸಿರಬೇಕಾಗಿರುತ್ತದೆ. ಈ ಎಲ್ಲಾ ಅಂಶಗಳಿಗೂ ಪ್ರತ್ಯೇಕ ಅಂಕಗಳನ್ನಿಟ್ಟು ತಂತ್ರಾಂಶದಲ್ಲಿರುವ ಮಾಹಿತಿಗಳಿಗೂ ಹಾಗೂ ಸಲ್ಲಿಸಿರುವ ದಾಖಲೆಗಳಲ್ಲಿರುವ ಮಾಹಿತಿಗೂ ತುಲನೆ ಮಾಡಿ ಅಂಕಗಳನ್ನು ನೀಡಲಾಗುತ್ತದೆ. ಹೆಚ್ಚು ಅಂಕ ಪಡೆದ ಗ್ರಾ.ಪಂಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಎಲ್ಲಾ ಪರೀಕ್ಷೆಯಲ್ಲಿ ರಾಮಕುಂಜ ಗ್ರಾಮ ಪಂಚಾಯಿತಿ ಉತ್ತೀರ್ಣವಾಗಿ ಅರ್ಹವಾಗಿಯೇ ಪ್ರಶಸ್ತಿಗೆ ಆಯ್ಕೆಯಾಗಿದೆ.

Also Read  ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ

ಉಡುಪಿ ಪೇಜಾವರ ಮಠಾಧೀಶರ ಹುಟ್ಟೂರು ರಾಮಕುಂಜ ಈಗಾಗಲೇ ವಿದ್ಯಾಕ್ಷೇತ್ರದಲ್ಲಿ ಅತ್ಯುನ್ನತ ಹೆಸರು ಮಾಡಿದ್ದು ವಿದ್ಯಾಕಾಶಿ ಎನ್ನುವ ಹೆಸರಿಗೆ ಖ್ಯಾತವಾಗಿದೆ. ಇದೀಗ ಪ್ರಶಸ್ತಿ ಬಂದಿರುವುದು ಇನ್ನಷ್ಟು ಮೆರಗು ನೀಡಿದೆ. ರಾಮಕುಂಜ ಹಾಗೂ ಹಳೆನೇರೆಂಕಿ ಎರಡು ಗ್ರಾಮಗಳನ್ನೊಳಗೊಂಡ ರಾಮಕುಂಜ ಗ್ರಾ. ಪಂನಲ್ಲಿ ಒಟ್ಟು 18 ಮಂದಿ ಸದಸ್ಯರಿದ್ದು, ಅಧ್ಯಕ್ಷರಾಗಿ ದಕ್ಷ ಆಡಳಿತ ನಡೆಸುತ್ತಿರುವ ಪ್ರಶಾಂತ್ ಆರ್.ಕೆ, ಉಪಾಧ್ಯಕ್ಷರಾಗಿ ಜಯಂತಿ ನಾಯ್ಕ್‌ ಪಿಡಿಒ ರವಿಚಂದ್ರ ಯು, ಕಾರ್ಯದರ್ಶಿ ಮರಿಯಮ್ಮ ವಿ.ಎಂ, ಹಾಗೂ ಸದಸ್ಯರುಗಳ ಉತ್ತಮ ಸೇವೆಯ ಪರಿಣಾಮ ಈ ಪ್ರಶಸ್ತಿ ಬಂದಿದೆ ಎಂದು ಹೇಳಲಾಗಿದೆ.

ಪ್ರಶಸ್ತಿ ಬಂದಿರುವುದು ನಮ್ಮೆಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿದೆ. ಅತೀವ ಸಂತಸ ಉಂಟು ಮಾಡಿದೆ, ನಮ್ಮ ಆಡಳಿತ ಮಂಡಳಿಯಲ್ಲಿ ನಾವೆಲ್ಲಾ ರಾಜಕೀಯ ಮರೆತು ಗ್ರಾಮದ ಅಭಿವೃದ್ಧಿಗೆ ಒಟ್ಟಾಗಿ ದುಡಿಯುತ್ತಿದ್ದೇವೆ, ಅಭಿವೃದ್ಧಿ ಅಧಿಕಾರಿ,ಕಾರ್ಯದರ್ಶಿ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಈ ಪ್ರಶಸ್ತಿಗೆ ಆಯ್ಕೆಯಾಗಲು ಸಾಧ್ಯವಾಗಿದೆ ಎಲ್ಲಾ ಅನುದಾನಗಳನ್ನು ಸಮಗ್ರವಾಗಿ ಬಳಸಿಕೊಂಡು ಸಮರ್ಪಕವಾಗಿ ಅನುಷ್ಟಾನ ಮಾಡಲಾಗಿದೆ. ಗ್ರಾಮದ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಮೊದಲ ಆಧ್ಯತೆ ನೀಡುತ್ತಿದ್ದೇವೆ. ಅಂತರಜಲ ವೃದ್ಧಿಯ ಬಗ್ಗೆ ಗ್ರಾ.ಪಂ ಹಲವು ಕಾರ್ಯಕ್ರಮಗಳನ್ನು ಮಾಡಿದೆ. ಜಿಲ್ಲೆಯಲ್ಲೆ ಗುರುತಿಸಿಕೊಳ್ಳುವಂತಹ ನೀರು ಇಂಗಿಸುವ ಕಾರ್ಯದ ಅಂಗವಾಗಿ ಕೆರೆಯೊಂದನ್ನು ಭಿವೃದ್ಧಿಪಡಪಸಿ ಸದ್ಯದಲ್ಲೇ ಲೋಕಾರ್ಪಣೆ ಮಾಡಲಿದ್ದೇವೆ. ಇದಕ್ಕೆ ಸುಳ್ಯ ಶಾಸಕ ಎಸ್.ಅಂಗಾ ಕೂಡ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ತಾ.ಪಂ, ಜಿ.ಪಂ ಹಾಗೂ ಎಲ್ಲಾ ಸಂಘ ಸಂಸ್ಥೆಗಳು, ಗ್ರಾಮಾಭಿವೃದ್ಧಿ ಯೋಜನೆಯವರು. ಜನಪ್ರತಿನಿಧಿಗಳು ಎಲ್ಲರೂ ಸಹಕಾರ ನಮ್ಮ ಪಂಚಾಯಿತಿ ಸದಾ ಇದೆ. ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.

Also Read  ಕರಾವಳಿಯ ಹಲವೆಡೆ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ➤ ಇಂದು (ಆ.06) ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ

 

error: Content is protected !!
Scroll to Top