ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ➤ ಆನ್ ಲೈನ್ ವಿಡಿಯೋ ಸರಿಯಲ್ಲ

(ನ್ಯೂಸ್ ಕಡಬ) newskadaba.com ಕಡಬ, ಮೇ.26. ಕೊರೊನಾ ಲಾಕ್‌ ಡೌನ್ ಘೋಷಣೆ ಆದ ಬಳಿಕ ಎಲ್ಲಾ ದೇವಸ್ಥಾನಗಳಲ್ಲಿ ಸೇವೆಗಳನ್ನು ನಿರ್ಬಂಧಿಸಲಾಗಿತ್ತು.

ಮಾ.27ರ ಬಳಿಕ ದೇವಸ್ಥಾನವನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು. ಆದರೆ ದೈನಂದಿನ ಪೂಜಾ ಕಾರ್ಯವನ್ನು ಮಾತ್ರ ನಡೆಸಲಾಗುತ್ತಿತ್ತು.

ಮೇ.3ರ ಲಾಕ್ ಡೌನ್ ನಿಯಮಗಳ ಸಡಿಲಿಕೆಯ ಬಳಿಕ  ವಾಹನ ಸಂಚಾರಗಳು ಆರಂಭವಾಗಿ, ಹೆಚ್ಚಿನ ಅಂಗಡಿಗಳು, ಬಾರ್, ವೈನ್ ಶಾಪ್‌ಗಳು ತೆರೆದುಕೊಂಡಿವೆ. ಆದರೆ ದೇವಸ್ಥಾನಗಳನ್ನು ತೆರೆದಿಲ್ಲ.

ಸರಕಾರ ಮದ್ಯದಂಗಡಿಗೆ ಅವಕಾಶ ಕೊಟ್ಟಿದೆ. ಆದರೆ ಪವಿತ್ರವಾದ ದೇವರ ದರ್ಶನ ಮತ್ತು ಪೂಜೆಗೆ ಅವಕಾಶ ಕೊಟ್ಟಿಲ್ಲ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿಬರಲಾರಂಭಿಸಿತು.

ಇದರಿಂದಾಗಿ ಧಾರ್ಮಿಕ ದತ್ತಿ ಸಚಿವರು ಆನ್‌ ಲೈನ್ ಪೂಜಾ ಕ್ರಮದ ಬಗ್ಗೆ ಚಿಂತಿಸಿ ಸಲಹೆ ಪಡೆಯಲಾರಂಭಿಸಿದರು. ಆನ್‌ಲೈನ್ ಪೂಜಾ ವ್ಯವಸ್ಥೆಯನ್ನು ರಾಜ್ಯದ ಪ್ರಮುಖ 50 ದೇವಸ್ಥಾನಗಳಲ್ಲಿ ಮಾಡುವಂತೆ ಸರಕಾರ ಆದೇಶಿಸಿದ್ದು, ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳು ಆನ್‌ ಲೈನ್ ಪೂಜೆಯ 50 ದೇವಾಲಯಗಳ ಪಟ್ಟಿಯಲ್ಲಿವೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ. 26 ರಿಂದ ಆನ್ ಲೈನ್ ಪೂಜೆಯನ್ನು ಮಾಡಿಸಬಹುದಾಗಿದೆ ಹಾಗೂ ಪೂಜೆಯನ್ನು ಲೈವ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸರ್ಕಾರ ಹೇಳಿಕೊಂಡಿದೆ.

ಈ ಬಗ್ಗೆ ಕೆಲವು ಗೊಂದಲಗಳು ದೇವಸ್ಥಾನದವರಿಗೆ, ಭಕ್ತರಿಗೆ ಉಂಟಾಗಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಪತ್ರಿಕಾ ಹೇಳಿಕೆ ನೀಡಿದ್ದು, ಅದರಂತೆ ಮೇ.26 ರ ಬಳಿಕ ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆಯ ವ್ಯವಸ್ಥೆ ಮಾಡುವುದಾಗಿ ಘೋಷಿಸಿದ್ದರು.

Also Read  ಬೆಂಗಳೂರಲ್ಲೂ ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿ ವೈರಸ್

ಆದರೆ ಈ ಬಗ್ಗೆ ಯಾವುದೇ ದೇವಸ್ಥಾನಗಳು ರೆಡಿಯಾದಂತೆ ಕಾಣುವುದಿಲ್ಲ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದಲೂ ಈ ಬಗ್ಗೆ ಅಭಿಪ್ರಾಯವನ್ನು ಸರ್ಕಾರ ಕೇಳಿದ್ದು, ಒಂದೊಮ್ಮೆ ಆನ್ ಲೈನ್ ಪೂಜೆಗೆ ಅವಕಾಶ ಮಾಡಿಕೊಟ್ಟರೆ ಯಾವೆಲ್ಲಾ ಪೂಜೆಯನ್ನು ಮಾಡಲು ಅವಕಾಶವಿದೆ ಎಂದು ಮಾಹಿತಿ ಕೇಳಿದ್ದು ಪೂರಕ ಮಾಹಿತಿ ಒದಗಿಸಲಾಗಿದೆ.

ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ನಡೆಯುವ ಯಾವುದೇ ಪೂಜೆಯನ್ನು ಕ್ಯಾಮರಾ, ವಿಡಿಯೋ ಮುಖಾಂತರ ಸೆರೆ ಹಿಡಿಯವ ಪದ್ದತಿಯಿಲ್ಲ. ಆದ ಕಾರಣ ಗರ್ಭ ಗುಡಿಯಲ್ಲಿ ನಡೆಯುವ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಕ್ಯಾಮರಾ ಮೂಲಕ ಕ್ಲಿಕ್ಕಿಸಿ ಲೈವ್ ಮುಖಾಂತರ, ಆನ್‌ಲೈನ್ ಪೂಜಾ ಆರ್ಡರ್ ಮಾಡಿದವರಿಗೆ ತಲುಪಿಸುವುದು ಅಷ್ಟೊಂದು ಸಮಂಜಸವಲ್ಲ ಎಂಬ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ದೇವಸ್ಥಾನದ ಪ್ರಧಾನ ಅರ್ಚಕರ ಅಭಿಪ್ರಾಯ ಕೂಡ ಸಂಗ್ರಹಿಸಲಾಗಿದ್ದು ಇದೇ ಅಭಿಪ್ರಾಯ ಅವರು ಕೂಡ ನೀಡಿರುವುದಾಗಿದೆ.

ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಗರ್ಭಗುಡಿ ಬಿಟ್ಟು ಹೊರ ಭಾಗದಲ್ಲಿ ನಡೆಯುವ ಪೂಜಾ ಸೇವೆಗಳನ್ನು ಭಾಗಶಃ ಲೈವ್ ವಿಡಿಯೋ ಮುಖಾಂತರ ಮಾಡಲು ಅವಕಾಶಗಳಿವೆ ಎನ್ನಲಾಗಿದೆ.

ಇಲ್ಲಿ ಹಿಂದೆಯೇ ಹಲವು ಸೇವೆಗಳನ್ನು ಆನ್ ಲೈನ್ ಮುಖಾಂತರ ಹಣ ಪಾವತಿಸಿ ಪೂಜೆ ಮಾಡಿಸುವ ವ್ಯವಸ್ಥೆ, ಪ್ರಸಾದವನ್ನು ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು.

ಒಂದೊಮ್ಮೆ ಆನ್ ಲೈನ್ ಮುಖಾಂತರ ಪೂಜೆ ಮಾಡಿಸುವುದಿದ್ದಲ್ಲಿ ನಾಗಪ್ರತಿಷ್ಠೆ, ಆಶ್ಲೇಷ ಪೂಜೆ, ಶೇಷ ಸೇವೆ, ಕಾರ್ತಿಕ ಪೂಜೆ, ಪಂಚಾಮೃತ ಅಭಿಷೇಕ, ಪವಮಾನ ಪಂಚಾಮೃತ ಅಭಿಷೇಕ, ಮಹಾಪೂಜೆ, ಕ್ಷೀರಾಭಿಷೇಕ, ರಾತ್ರಿ ಮಹಾಪೂಜೆ ಇನ್ನಿತರ ಸೇವೆಗಳನ್ನು ಮಾಡಿಸಬಹುದಾಗಿದೆ.

Also Read  ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ ಹರಿಯಬಿಟ್ಟ ಕಿಡಿಗೇಡಿಗಳು ► ಮಂಗಳೂರಿನ ವಿದ್ಯಾರ್ಥಿನಿಯಿಂದ ಪೊಲೀಸ್ ಕಮಿಷನರ್ ಗೆ ದೂರು

ಇಷ್ಟರವರೆಗೆ ಸುಬ್ರಹ್ಮಣ್ಯ ದೇವಸ್ಥಾನದ ಪೂಜಾ ಕಾರ್ಯಗಳನ್ನು ಲೈವ್ ನಡೆಸಿದ ಉದಾಹರಣೆಗಳಿಲ್ಲ. ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಹೊರಾಂಗಣದಲ್ಲಿ ನಡೆಯುವ ಉತ್ಸವಾದಿಗಳು, ರಥೋತ್ಸವವನ್ನು ಲೈವ್ ಮಾಡಲಾಗಿತ್ತು. ಲೈವ್ ಮಾಡುವುದಿದ್ದರೆ ಪೂಜಾ ಕಾರ್ಯ ನಡೆಯುವ ಕಡೆ ವಿಡಿಯೋ ಮಾಡಲು ವ್ಯವಸ್ಥೆ ಮಾಡಬೇಕು. ಅಲ್ಲದೆ ಅದಕ್ಕಾಗಿ ಪ್ರತ್ಯೇಕ ಆಪ್ ಬಿಡುಗಡೆ ಮಾಡಬೇಕು.

ಅಲ್ಲದೆ ಕೆಲವೊಂದು ಸೇವೆಗಳ ಶುಲ್ಕ 100 ರೂಪಾಯಿ ಇದ್ದು ಇದನ್ನು ಲೈವ್ ಗೆ  ವ್ಯವಸ್ಥೆಗೊಳಿಸುವುದು ಕಷ್ಟದ ಕೆಲಸ. ಆನ್ ಲೈನ್, ಲೈವ್ ಮಾಡಲು ಟೆಂಡರ್ ಆಗಬೇಕು. ಇಷ್ಟೆಲ್ಲಾ ಆಗುವಾಗ ಲಾಕ್ ಡೌನ್ ಸಡಿಲಿಕೆ ಆಗಿ ದೇವಾಲಯ ಮುಕ್ತ ಪ್ರವೇಶ ಆರಂಭವಾಗಬಹುದು ಎನ್ನಲಾಗಿದೆ.

ಹಾಗೊಂದು ವೇಳೆ ಪೂಜಾ ಕಾರ್ಯಗಳ ಲೈವ್ ವಿಡಿಯೋ ಮಾಡಲು ಸರ್ಕಾರ ಹಟಕ್ಕೆ ಬಿದ್ದರೆ ಭಕ್ತಾಧಿಗಳು ತಿರುಗಿ ಬೀಳುವ ಲಕ್ಷಣ ಕಂಡು ಬಂದಿದೆ.

ಈಗಾಗಲೆ ಕೆಲವರು ಗರ್ಭಗುಡಿಯ ಫೋಟೋ, ವಿಡಿಯೋ ತೆಗೆಯಲು ಅವಕಾಶ ಇಲ್ಲದಿರುವ ಕಾರಣ ಇದಕ್ಕೂ ಅವಕಾಶ ನೀಡಬಾರದು ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ಹೊರ ಹಾಕತೊಡಗಿದ್ದಾರೆ. ಇಲ್ಲಿಯ ಪದ್ದತಿ ಪ್ರಕಾರ ಗರ್ಭ ಗುಡಿಯೊಳಗೆ ನಡೆಯುವ ವಿಧಿವಿಧಾನಗಳ ವಿಡಿಯೋ, ಫೋಟೋ ತೆಗೆಯುವ ಪದ್ದತಿ ಇಲ್ಲ. ಆದ ಕಾರಣ ಆನ್ ಲೈನ್ ವಿಡಿಯೋ ಮಾಡುವ ವಿಚಾರ ಸರಿಯಲ್ಲ ಎಂದು ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top