ಶ್ರೀ ಮಹಾಗಣಪತಿ ಸೇವಾ ಸಮಿತಿ► ಕೊೖಲ-ರಾಮಕುಂಜ ಗಣೇಶೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆ.30, ಶ್ರೀ ಮಹಾಗಣಪತಿ ಸೇವಾ ಸಮಿತಿ ಕೊೖಲ-ರಾಮಕುಂಜ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ರಾಮಕುಂಜ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ.ಆರ್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ನಡೆಯಿತು.

ಶುಕ್ರವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಉಷ:ಕಾಲ ಪೂಜೆ ನಡೆಯಿತು. ಬಳಿಕ ದ್ವಾದಶ ನಾಳಿಕೇಳ ಗಣಯಾಗ ನಡೆಯಿತು. ಶಾರದನಗರ ಶ್ರೀ ಶಾರದಾಂಬ ಭಜನಾ ಮಂಡಳಿ ಮತ್ತು ಕುಂಡಾಜೆ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ ನಡೆಯಿತು. ಈ ಸಂದರ್ಭ ಸಾರ್ವಜನಿಕರಿಗೆ ವಿವಿಧ ಸ್ಪರ್ದೆಗಳು ನಡೆಯಿತು. ಕಾರ್ಯಕ್ರಮಕ್ಕೆ ಸುಳ್ಯ ಶಾಸಕ ಎಸ್ ಅಂಗಾರ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಭೇಟಿ ನೀಡಿ ಶುಭಹಾರೈಸಿದರು. ಸಂಜೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆದ ಬಳಿಕ ಯಕ್ಷಗಾನ ಬಯಲಾಟ ನಡೆಯಿತು.

ಶನಿವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರ ಉಷ:ಕಾಲ ಪೂಜೆ, ಆಮಂತ್ರಿತ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಬಳಿಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಭಕ್ತಿಗಾನ ಕಾರ್ಯಕ್ರಮ ನಡೆಯಿತು. ಶ್ರೀ ಮಹಾಗಣಪತಿ ಹೋಮ, ಅಪರಾಹ್ನ ಶ್ರೀ ಮಹಾಗಣಪತಿ ದೇವರಿಗೆ ಮಧ್ಯಾಹ್ನ ಪೂಜೆ, ನಡೆಯಿತು. ಮಧ್ಯಾಹ್ನ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಂಗಳೂರು ಸಂತ ಅಲೋಸಿಯಸ್ ಉಪನ್ಯಾಸಕ ಡಾ.ಗಣೇಶ್ ಅಮಿನ್ ಸಂಕಮಾರು ಮಾತನಾಡಿ, ಸತ್ಯ, ಹೃದಯವಂತಿಕೆಯ ಜೀವನವೇ ನಿಜವಾದ ಧರ್ಮ. ಪ್ರಕೃತಿಯನ್ನು ಪೂಜಿಸಿಕೊಂಡು ಅದರಲ್ಲಿನ ವಿಜ್ಞಾನವನ್ನು ಅರಿತು ನಮ್ಮ ಹಿರಿಯರು ಬಾಳಿ ಬದುಕಿದ್ದಾರೆ. ಪುರಾಣವನ್ನು ಮೂಡನಂಬಿಕೆಯೆನ್ನದೆ ಮೂಲನಂಬಿಕೆಯೆಂದು ಆಚರಣೆ ಮಾಡಿದಲ್ಲಿ ಮತ್ತೆ ನಮ್ಮ ಹಿರಿಯರ ಪರಿಕಲ್ಪಣೆಯ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸಕ್ತ ಯುವ ಸಮೂಹ ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುಂದಿನ ಪೀಳಿಗೆಗೆ ಧರ್ಮದ ಮಹತ್ವವನ್ನು ಪಸರಿಸಬೇಕು. ಮನೆಯೇ ಸಂಸ್ಕಾರದ ಕೇಂದ್ರ ಬಿಂದು. ಮನೆತಾಯಿಯ ಉತ್ತಮ ನಡೆಯಿಂದ ಆ ಮನೆಯ ಸಂಸ್ಕಾರ ಮೇಲೈಸುತ್ತದೆ ಎಂದರು.

Also Read  ಅರಂತೋಡು ಗ್ರಾಮ ಪಂಚಾಯತ್ ಸ್ವಚ್ಛತಾ ಮೇಲ್ವಿಚಾರಕಿ ಸೌಮ್ಯ ಲತಾ ರವರಿಗೆ ಸ್ವಚ್ಛತಾ ಹೀ ಸೇವಾ ಆಂದೋಲನ ಪುರಸ್ಕಾರ

ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್ ಬಿಳಿನೆಲೆ ಮಾತನಾಡಿ, ಶ್ರೀ ಗಣೇಶನ ವಿಗ್ರಹದ ಪ್ರತಿಯೊಂದು ಅಂಗವು ಮನುಷ್ಯ ಜೀವನಕ್ಕೆ ಸಂದೇಶವನ್ನು ನೀಡುತ್ತದೆ. ಪ್ರತಿ ಅಂಗದ ಅರ್ಥವನ್ನು ವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಹಿಂದೂ ಸಂಸ್ಕೃತಿಯ ಚೌಕಟ್ಟಿನೊಳಗೆ ಹಬ್ಬಗಳ ಆಚರಣೆ ನಡೆದು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು, ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗದೆ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗೆ ಪೂರಕವಾಗಬೇಕು ಎಂದರು.

Also Read  ಮಂಗಳೂರು: ಲಂಚ ಸ್ವೀಕಾರ ಪ್ರಕರಣ ➤ ನಗರ ಸರ್ವೇಯರ್ ಅರೆಸ್ಟ್

ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಮೀಯಾಳ ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಕೋಶಾಧಿಕಾರಿ ಹರೀಶ್ ಬರಮೇಲು ಕ್ರೀಡಾಕೂಟ ವಿಜೇತರ ಪಟ್ಟಿ ವಾಚಿಸಿದರು. ಸಮಿತಿ ಸಂಚಾಲಕ ಗುರುಪ್ರಸಾದ್ ರಾಮಕುಂಜ ಸ್ವಾಗತಿಸಿದರು. ಸದಸ್ಯ ಪದ್ಮಪ್ಪ ಗೌಡ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸುನಿತ್ರಾಜ್ ಶೆಟ್ಟಿ ನಿರೂಪಿಸಿದರು. ಸಾಯಂಕಾಲ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆದು ಶ್ರೀ ದೇವರ ಶೋಭಾಯಾತ್ರೆ ಗೋಳಿತ್ತಡಿಗೆ ಆಗಮಿಸಿ ಬಳಿಕ ಗಣೇಶನಗರ, ಶಾರದಾನಗರ, ಗೋಕುಲನಗರ ಮಾರ್ಗವಾಗಿ ಕೆಮ್ಮಾರದ ತನಕ ಸಾಗಿತು. ಕೆಮ್ಮಾರದಲ್ಲಿ ಕಟ್ಟೆಪೂಜೆ ಬಳಿಕ ಶ್ರೀ ಮಹಾಗಣಪತಿ ದೇವರ ವಿಗ್ರಹ ಜಲಸ್ಥಂಭನ ನಡೆಯಿತು. ಕೀಲುಕುದುರೆ, ಗೊಂಬೆಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿತ್ತು.

 

error: Content is protected !!
Scroll to Top