(ನ್ಯೂಸ್ ಕಡಬ) newskadaba.com ರಾಯಚೂರು, ಆ.29, ಮದುವೆಯಾಗಿ ಕೆಲವೇ ತಿಂಗಳಲ್ಲಿ ಗಂಡನನ್ನ ಕಳೆದುಕೊಂಡ ಯುವತಿಗೆ ಆಸರೆಯಾಗಬೇಕಾದ ಗಂಡನ ಮನೆಯವರಿಂದಲೇ ಯುವತಿಗೆ ವಂಚನೆಯಾದ ಘಟನೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಮಾವಿನಬಾವಿ ಗ್ರಾಮದಲ್ಲಿ ನಡೆದಿದೆ.
ಸ್ವಂತ ಮೈದುನನೇ ಅತ್ತಿಗೆಗೆ ಸೇರಬೇಕಾದ ಹಣವನ್ನೇ ಲೂಟಿ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರಾಯಚೂರಿನ ಲಿಂಗಸುಗೂರು ತಾಲೂಕಿನ ಮಾವಿನಬಾವಿ ಗ್ರಾಮದ ಮಂಜುಳಾ, ರಾಮನಗರದ ಬಿಡದಿಯ ಲಾರಿ ಡ್ರೈವರ್, ಹೂನೂರಪ್ಪ ಎಂಬವರನ್ನು ಮದುವೆ ಆಗಿದ್ದರು. ಆದ್ರೆ ಮಂಜುಳಾ ಅವರ ಗಂಡ 4 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಬಳಿಕ ಗಂಡನ ಇನ್ಸುರೆನ್ಸ್ ಹಣಕ್ಕಾಗಿ ನಾಲ್ಕು ವರ್ಷ ಹೋರಾಟ ನಡೆಸಿದ ಬಳಿಕ ಪತ್ನಿಗೆ ಸಿಕ್ಕಿದ್ದು ಮಾತ್ರ ನಿರಾಸೆ. ಇನ್ಸುರೆನ್ಸ್ ಹಣಕ್ಕಾಗಿ ಪತ್ನಿ ವಕೀಲರನ್ನ ನೇಮಿಸಿದ್ರು. ಆದ್ರೆ ಲಿಂಗಸುಗೂರಿನ ವಕೀಲ ಭೂಪನಗೌಡ ಹಾಗೂ ಮೈದುನ ಬಸವರಾಜ್ ಸೇರಿ ಇನ್ಸುರೆನ್ಸ್‍ನಿಂದ ಬಂದ 6 ಲಕ್ಷದ 75 ಸಾವಿರ ಹಣವನ್ನು ಲೂಟಿ ಮಾಡಿದ್ದಾರೆ. ಮೈದುನ ಬಸವರಾಜ್ ತನ್ನ ಪತ್ನಿ ರೇಣುಕಾಳ ನಕಲಿ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಬಳಸಿ, ರೇಣುಕಾಳ ಹೆಸರಿನ ಜಾಗದಲ್ಲಿ ಮಂಜುಳಾ ಅಂತ ತಿದ್ದಿ, ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಿದ್ದಾನೆ.
ಬಡತನದಲ್ಲಿರೋ ಮಂಜುಳಾಗೆ ತವರಿನಿಂದಲೂ ಯಾವುದೇ ಸಹಾಯ ಸಿಕ್ತಿಲ್ಲ. ಇತ್ತ ಗಂಡನ ಇನ್ಸುರೆನ್ಸ್ ಹಣವೂ ಇಲ್ಲ. ಇದೆಲ್ಲಾ ಗೊತ್ತಿದ್ರೂ ಪೊಲೀಸರು ಕೇಸ್ ದಾಖಲಿಸಿಕೊಳ್ಳದೇ ನ್ಯಾಯಾಲಯದ ಮೆಟ್ಟಿಲೇರಲು ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ಅಣ್ಣ ಸತ್ತ ಬಳಿಕ ಅತ್ತಿಗೆಗೆ ಸಹಾಯ ಮಾಡಬೇಕಿದ್ದ ಮೈದುನ ವಂಚನೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ.