(ನ್ಯೂಸ್ ಕಡಬ) newskadaba.com ಕಡಬ, ಆ.28, 2016-17ನೇ ಸಾಲಿನಲ್ಲಿ ನಡೆದ ರಾಷ್ಟ್ರಮಟ್ಟದ “ರಾಷ್ಟ್ರೀಯ ಪ್ರತಿಭಾ ಅನ್ವೇಷಣಾ” ಪರೀಕ್ಷೆಯಲ್ಲಿ ಸಮರ್ಥ ಚೂಂತಾರು ರವರು 15ನೇ ರ್ಯಾಂಕ್ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎಸ್ಸೆಸ್ಸೆಲ್ಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡುವುದಕ್ಕಾಗಿ ಈ ಪರೀಕ್ಷೆಯನ್ನು ರಾಷ್ಟ್ರಾದ್ಯಾಂತ ನಡೆಸಲಾಗಿದ್ದು, ಕಳೆದ ನವೆಂಬರ್ನಲ್ಲಿ ನಡೆದ ರಾಜ್ಯಮಟ್ಟದ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಸುಮಾರು 85,000 ವಿದ್ಯಾರ್ಥಿಗಳು ಪೈಪೋಟಿ ನಡೆಸಿದ್ದರು. ಮಂಗಳೂರಿನಿಂದ ಸುಮಾರು 15 ಮಂದಿ ಈ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ್ದರು ಮತ್ತು ರಾಷ್ಟ್ರಮಟ್ಟದ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿದ್ದರು.
ಸಮರ್ಥ ಚೂಂತಾರು ರಾಜ್ಯಮಟ್ಟದಲ್ಲಿ 15ನೇ ರ್ಯಾಂಕ್ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಎಲ್ಲ ರಾಜ್ಯಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳು ತೀವ್ರ ಪೈಪೋಟಿ ನಡೆಸುತ್ತಾರೆ. ಸುಮಾರು 1000 ವಿದ್ಯಾರ್ಥಿಗಳಿಗೆ (750 ಜನರಲ್ ಮತ್ತು 250 ಮೀಸಲಾತಿ) ಈ ವಿದ್ಯಾರ್ಥಿ ವೇತನವನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರ ನೀಡುತ್ತದೆ. ಎಟಿಎಸ್ಇ ಎನ್ನುವುದು ಜಿಇಇ, ಒಲಂಪಿಯಾಡ್, ಕೆವೈಪಿವೈ ಪರೀಕ್ಷೆಗೆ ಸಮನಾದ ಪರೀಕ್ಷೆಯಾಗಿದ್ದು ಆಯ್ಕೆಯಾದ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಪ್ರತಿಭೆ ಎಂಬ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಸಮರ್ಥ ಚೂಂತಾರು ಇವರು ಶಾರದಾ ವಿದ್ಯಾಲಯ ಇದರ ಹಳೇ ವಿದ್ಯಾರ್ಥಿಯಾಗಿದ್ದು ಎಸ್ಎಸ್ಎಲ್ಸಿವರೆಗೆ ಶಾರದಾ ವಿದ್ಯಾಲಯದಲ್ಲಿ ಕಲಿತಿರುತ್ತಾರೆ. ಪ್ರಸ್ತುತ ಲೂಡ್ರ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಸಿಎಫ್ಎಎಲ್ (CFAL) ಕುಂಟಿಕಾನ ಈ ಸಂಸ್ಥೆಯಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.
ಸಮರ್ಥ ಚೂಂತಾರು ಇವರು ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ಮೋಹನ್ ಇವರ ಪುತ್ರನಾಗಿರುತ್ತಾನೆ. ಕಳೆದ ವರ್ಷ ಸಿಎಫ್ಎಎಲ್ ಸಂಸ್ಥೆಯಲ್ಲಿ ನಡೆದ ಜೂನಿಯರ್ ರಾಮಾನುಜನ್ ಪರೀಕ್ಷೆಯಲ್ಲಿ ಗೆದ್ದು ಜೂನಿಯರ್ ರಾಮಾನುಜನ್ ಪ್ರಶಸ್ತಿಯನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಗಣಿತ ಶಾಸ್ತ್ರದಲ್ಲಿ ವಿಶೇಷ ಆಸಕ್ತಿಯಿರುವ ಸಮರ್ಥ ಚೂಂತಾರು ಮುಂದೆ ಗಣಿತ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡುವ ಹಂಬಲ ಹೊಂದಿರುತ್ತಾರೆ.