ವಿವಾಹಿತನಿಂದ ಯುವತಿಯ ಅಪಹರಣ ► ತಾಳಿ ಕಟ್ಟಿ ಅತ್ಯಾಚಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.28, ವಿವಾಹಿತ ವ್ಯಕ್ತಿಯೊಬ್ಬ 20 ವರ್ಷದ ಯುವತಿಯನ್ನು ಅಪಹರಿಸಿ ಆಕೆಗೆ ತಾಳಿ ಕಟ್ಟಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾನೆ.

ಅಗ್ರಹಾರ ದಾಸರಹಳ್ಳಿಯ ನಿವಾಸಿ ಸಂತೋಷ್‌ (32) ಜೈಲು ಪಾಲಾದ ವ್ಯಕ್ತಿ. ಪತ್ನಿ ಮತ್ತು ಮಕ್ಕಳನ್ನು ತೊರೆದು ಒಂಟಿಯಾಗಿದ್ದ ಈತ ಮನೆ ಸಮೀಪವೇ ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದ. ತನ್ನ ಅಂಗಡಿಗೆ ಆಗಾಗ ಇಸ್ತ್ರಿಗೆ ಬಟ್ಟೆ ತೆಗೆದುಕೊಂಡು ಬರುತ್ತಿದ್ದ ಯುವತಿಯನ್ನು ಮದುವೆಯಾಗಲು ಇಚ್ಛಿಸಿದ್ದ ಇದಕ್ಕೆ ಯುವತಿ ನಿರಾಕರಿಸಿ ಪೋಷಕರಿಗೆ ಆತನ ವರ್ತನೆ ಬಗ್ಗೆ ತಿಳಿಸಿದ್ದಳು. ಪೋಷಕರು ಬುದ್ಧಿ ಹೇಳಲು ಹೋದಾಗ ” ನಿಮ್ಮ ಮಗಳನ್ನು ನನಗೇ ಕೊಟ್ಟು ಮದುವೆ ಮಾಡಿ” ಎಂದು ಗೋಗರೆದಿದ್ದ. ಅದಕ್ಕೆ ಪೋಷಕರೂ ಒಪ್ಪದೆ ಛೀಮಾರಿ ಹಾಕಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ಆರೋಪಿ, ಎರಡು ವರ್ಷಗಳ ಹಿಂದೆ ಪತ್ನಿ ಮತ್ತು ಮಕ್ಕಳನ್ನು ತೊರೆದು ಪ್ರತ್ಯೇಕವಾಗಿ ನೆಲೆಸಿದ್ದ. ತನ್ನ ಮನೆ ಸಮೀಪವೇ ಇದ್ದ ಸಂತ್ರಸ್ತ ಯುವತಿ ಕೂಡ ತನ್ನದೇ ಜಾತಿ ಎನ್ನುವ ಕಾರಣದಿಂದ ಆಕೆಯನ್ನು ಮದುವೆಯಾಗಲು ಇಚ್ಛಿಸಿದ್ದ. ಯುವತಿ ಹಲವು ವರ್ಷಗಳಿಂದ ಖಿನ್ನತೆಗೆ ಒಳಗಾಗಿದ್ದರಿಂದ ತಾನೇ ಮದುವೆ ಆಗುತ್ತೇನೆ, ಅಡ್ಡ ಬರಬೇಡಿ ಎಂದೂ ಪೋಷಕರಿಗೆ ತಿಳಿಸಿದ್ದ. ಆದರೂ ಪೋಷಕರು ಒಪ್ಪದಿದ್ದಾಗ ಆ.24 ರಂದು ಯುವತಿಯನ್ನು ಅಪಹರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Also Read  ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ

ಆರೋಪಿಯ ಇಸ್ತ್ರಿ ಅಂಗಡಿ ಪಕ್ಕದಲ್ಲೇ ಸಂತ್ರಸ್ತೆಯ ಅಜ್ಜಿ ಮನೆ ಇದ್ದು, ಯುವತಿ ಆಗಾಗ ಬರುತ್ತಿದ್ದಳು. ಹೀಗೆ ಆ.24 ರಂದು ಅಜ್ಜಿ ಮನೆಗೆ ಬಂದಿದ್ದ ಆಕೆಯನ್ನು ಅಪಹರಿಸಿದ್ದ ಆರೋಪಿ ತನ್ನ ಮನೆಯಲ್ಲಿ ಕೂಡಿ ಹಾಕಿ ದೇವರ ಫೋಟೋ ಎದುರಿಗೆ ತಾಳಿ ಕೂಡ ಕಟ್ಟಿದ್ದ. ಆನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆಗ ಪೋಷಕರು ತನಗೇ ಕೊಟ್ಟು ಮದುವೆ ಮಾಡಬೇಕಾಗುತ್ತದೆ ಎಂದು ಅಂದಾಜಿಸಿ ಆರೋಪಿ ಇಷ್ಟೆಲ್ಲಾ ಅನಾಹುತ ಮಾಡಿದ್ದ.

ಈ ನಡುವೆ, ಅಜ್ಜಿ ಮನೆಗೆ ಹೋದ ಯುವತಿ ವಾಪಸ್ಸಾಗದಿದ್ದ ಹಿನ್ನೆಲೆಯಲ್ಲಿ ಸಂಶಯಗೊಂಡ ಅಕ್ಕಪಕ್ಕದವರೆಲ್ಲಾ ಹುಡುಕಾಟ ನಡೆಸಿದ್ದರಾದರೂ ಪ್ರಯೋಜನ ಆಗಿರಲಿಲ್ಲ. ಮರುದಿನ ಮಧ್ಯಾಹ್ನ ಸ್ಥಳೀಯರೊಬ್ಬರಿಗೆ ಸಂತೋಷ್‌ ಮೇಲೆ ಅನುಮಾನ ಬಂದು ಆತನ ಮನೆಗೆ ನುಗ್ಗಿ ಪರೀಕ್ಷಿಸಿದಾಗ ವಿಷಯ ಬಹಿರಂಗಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Also Read  ಬಂಟ್ವಾಳ: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ..!

”ಪೋಷಕರು ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಅಕ್ಕ ಪಕ್ಕದವರು ಯುವತಿಯನ್ನು ಸಂತೋಷ್‌ ಮನೆಯಲ್ಲಿ ಪತ್ತೆ ಹಚ್ಚಿದ್ದರೂ ಆತ ಮಾತ್ರ ಏನೂ ಗೊತ್ತಿಲ್ಲದವನಂತೆ ಇಸ್ತ್ರಿ ಅಂಗಡಿಯಲ್ಲೇ ಇದ್ದು ಬಿಟ್ಟಿದ್ದ. ಅಪಹರಣ, ಅತ್ಯಾಚಾರ ಆರೋಪದ ಅಡಿಯಲ್ಲಿ ಸಂತೋಷ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ,” ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!
Scroll to Top