ರೆಂಜಿಲಾಡಿ ಆರೋಗ್ಯ ಉಪಕೇಂದ್ರಕ್ಕೆ ಕೂಡಿಬಾರದ ಕಟ್ಟಡ ಭಾಗ್ಯ!ಜಮೀನು ಖಾದಿರಿಸಿದರೂ ಅನುದಾನ ಇಲ್ಲ | ಬಾಡಿಗೆ ಕಟ್ಟದಲ್ಲಿ ಆರೋಗ್ಯ ಸೇವೆ !

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಫೆ.14. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಉದ್ದೇಶಿತ ಆರೋಗ್ಯ ಉಪಕೇಂದ್ರ ಕಟ್ಟಡಕ್ಕೆ ಸ್ಥಳ ಖಾದಿರಿಸಲಾಗಿದ್ದರೂ ಇನ್ನೂ ಸರಕಾರದಿಂದ ಅನುದಾನ ಬಿಡುಗಡೆಯಾಗದೆ ಇರುವುದರಿಂದ ಉಪಕೇಂದ್ರ ಕಟ್ಟಡ ಕನಸಾಗಿಯೇ ಉಳಿದಿದೆ. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿದೆ.

ರೆಂಜಿಲಾಡಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಪ್ರಾರಂಭಿಸಬೇಕೆಂಬ ಗ್ರಾಮಸ್ಥರ ಹಲವಾರು ವರ್ಷಗಳ ಆಗ್ರಹದಂತೆ ಉಪಕೇಂದ್ರ ಮಂಜೂರಾಗಿತ್ತು. ಆರೋಗ್ಯ ಸಹಾಯಕಿಯೋರ್ವರನ್ನು ನೇಮಿಸಲಾಗಿದೆ. ಆದರೆ ಜಾಗದ ಸಮಸ್ಯೆಯಿಂದಾಗಿ ಅಂದಿನಿಂದ ಇಂದಿನವರೆಗೂ ಆರೋಗ್ಯ ಕೇಂದ್ರ ಕಟ್ಟಡ ಪ್ರಾರಂಭಕ್ಕೆ ವಿಘ್ನಗಳೇ ಎದುರಾಗುತ್ತಿತ್ತು. ನೂಜಿಬಾಳ್ತಿಲ ಗ್ರಾಮಸಭೆಗಳಲ್ಲಿ ಪ್ರತೀ ಬಾರಿಯು ಆರೋಗ್ಯ ಉಪಕೇಂದ್ರದ ಬಗ್ಗೆ ಚರ್ಚೆಗಳು ನಡೆದು, ಗದ್ದಲಗಳೇ ನಡೆಯುತ್ತಿತ್ತು. ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಅಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಆರೋಗ್ಯ ಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಿದ್ದಾರೆಯೇ ವಿನಃ ಕಾರ್ಯಗತಗೊಂಡಿಲ್ಲ ಎನ್ನತ್ತಾರೆ ಗ್ರಾಮಸ್ಥರು. ಜಾಗದ ಸಮಸ್ಯೆಯಿಂದ ಕಟ್ಟಡ ಪ್ರಾರಂಭಕ್ಕೆ ಸಾಧ್ಯವಾಗದಿದ್ದ ಸಂದರ್ಭದಲ್ಲಿ ಸ್ಥಳೀಯ ಗ್ರಾ.ಪಂ. ಸದಸ್ಯರ ಮುತುವರ್ಜಿಯಿಂದ ಪಂಚಾಯತ್ ನೆರವಿನೊಂದಿಗೆ ರೆಂಜಿಲಾಡಿ ಗ್ರಾಮದ ಮೀನಾಡಿಯಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಸರ್ವೆ ನಂಬ್ರ 73ರಲ್ಲಿ 0.10 ಎಕ್ರೆ ಸ್ಥಳವನ್ನು ಖಾಸಗಿಯವರಿಂದ ಪಡೆದು ಕಂದಾಯ ಇಲಾಖೆಯಿಂದ ಸ್ಥಳ ಪರಿಶೀಲಿಸಿ, ಉಪಕೇಂದ್ರದ ಹೆಸರಿಗೆ ಪಹಣಿ ಪತ್ರ ಹಾಗೂ ನಕಾಶೆ ತಯಾರಿಸಿ ಗಡಿ ಗುರುತು ಮಾಡಿ ಜಮೀನಿಗೆ ಸೂಕ್ತ ಬೇಲಿ ಹಾಕಿ ಬಂದೋಬಸ್ತ್ ವ್ಯವಸ್ಥೆಯನ್ನು ಮೂರು ವರ್ಷಗಳ ಹಿಂದೆಯೇ ಮಾಡಲಾಗಿದ್ದರೂ ಉಪಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುದಾನದ ಬಗ್ಗೆ ಯಾವುದೇ ಮಾಹಿತಿ ಆರೋಗ್ಯ ಇಲಾಖೆಯಿಂದ ಇನ್ನೂ ಬಂದಿಲ್ಲ.

Also Read  ಅವಿನಾಶ್ ಬಸ್ ಮಾಲಕ ನಾರಾಯಣ ರೈ ಆತ್ಮಹತ್ಯೆ..!

ರೆಂಜಿಲಾಡಿ ವ್ಯಾಪ್ತಿಯಲ್ಲಿ 421 ಕುಟುಂಬಗಳಿದ್ದು, ಸುಮಾರು ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಪ್ರಸ್ತುತ ಮಧುರಾ ಎಂಬವರು ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ವಂತ ಜಮೀನು ಲಭ್ಯವಾದರೂ ಕಟ್ಟಡ ನಿರ್ಮಾಣವಾಗದೇ ಬಾಡಿಗೆ ಕಟ್ಟಡದಲ್ಲಿ ಆರೋಗ್ಯ ಸೇವೆ ನೀಡುವ ಪರಿಸ್ಥಿತಿ ಇಲ್ಲಿಯದ್ದು. ಗ್ರಾ.ಪಂ. ವತಿಯಿಂದ ಜಾಗ ಗುರುತಿಸಿದ ಬಳಿಕ ಕಟ್ಟಡ ಪ್ರಾರಂಭಕ್ಕೆ ಕೂಡಲೇ ಅನುದಾನ ಒದಗಿಸುವಂತೆ ಆರೋಗ್ಯ ಇಲಾಖೆಗೆ ಹಲವು ಮನವಿಗಳನ್ನು, ಗ್ರಾಮ ಸಭೆಯಲ್ಲಿ ನಿರ್ಣಯಗಳನ್ನು ಮಾಡಿ ಕಳುಹಿಸಿದರೂ ಆ ನಿರ್ಣಯಕ್ಕೂ ಬೆಲೆ ಇಲ್ಲದಂತಾಗಿದೆ. ಆರೋಗ್ಯ ಇಲಾಖೆಯ ಸೇವೆಗೆ ಅನುದಾನ ಒದಗಿಸಲು ತಡ ಮಾಡುತ್ತಿರುವುದು ದುರಂತ ಎನ್ನುತ್ತಾರೆ ಗ್ರಾಮಸ್ಥರು.

Also Read  ಕುಂದಾಪುರ : ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿದ ಪ್ರಕರಣ..!! ➤  ಅಂತರಾಜ್ಯ ಕಳ್ಳರಿಬ್ಬರ ಬಂಧನ

ಅನುದಾನದ ಕೊರತೆ?
ರೆಂಜಿಲಾಡಿಯ ಆರೋಗ್ಯ ಉಪಕೇಂದ್ರದ ಬಗ್ಗೆ ನೂಜಿಬಾಳ್ತಿಲ ಗ್ರಾ.ಪಂ. ವತಿಯಿಂದ ಸೂಕ್ತ ದಾಖಲಾತಿ, ಜಾಗದ ಪತ್ರದೊಂದಿಗೆ ಎಲ್ಲಾ ವಿವರಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಕಳುಹಿಸಿಕೊಡಲಾಗಿದ್ದು, ಅವರು ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದಾರೆ. ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಗೊಂಡಿಲ್ಲ ಎಂಬ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ತಾಲೂಕಿನಲ್ಲಿ ಈ ಬಗ್ಗೆ ಕೇಳಿದರೆ ಯಾವುದೇ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.

error: Content is protected !!
Scroll to Top