(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. ಪ್ರಗತಿಯಲ್ಲಿರುವ ಅಂಗನವಾಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಪ್ರತೀ ಅಂಗನವಾಡಿಗಳ ಕೆಲಸ ಕಾರ್ಯಗಳು ಫೆಬ್ರವರಿ 29 ರೊಳಗೆ ಪೂರ್ಣಗೊಳಿಸಬೇಕು, ಶಿಶು ಅಭಿವೃದ್ಧಿ ಇಲಾಖಾ ಸಿಬ್ಬಂದಿಗಳು ತಕ್ಷಣ ಪ್ರಗತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿ ಅಭಿವೃದ್ಧಿ ಕುರಿತು ವರದಿ ನೀಡಬೇಕು ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ ಆರ್. ಸೆಲ್ವಮಣಿ ಸೂಚಿಸಿದರು.
ಸೋಮವಾರ ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಮೀಕ್ಷಾ ಸಭೆಯನ್ನು ಕುರಿತು ಮಾತಾಡಿದರು. ಬಾಕಿ ಇರುವ ಅಂಗನವಾಡಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಲಾಯಿತು. ಇದರಲ್ಲಿ ಕೆಲವು ಅಂಗನವಾಡಿ ಕೇಂದ್ರಗಳು ಪೂರ್ಣಗೊಂಡಿದ್ದು, ಇನ್ನೂ ಕೆಲವು ಅಂಗನವಾಡಿ ಕೇಂದ್ರಗಳ ಕಾಮಗಾರಿ ಬಾಕಿ ಉಳಿದುಕೊಂಡಿರುತ್ತದೆ, ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕಲ್ಲಮುಂಡ್ಕೂರು ಗ್ರಾಮದ ಕುಂಟಾಲಪಲ್ಕೆ ಕೊರಗ ಕಾಲೋನಿಯಲ್ಲಿ ನೀರಿನ ಮೂಲವನ್ನು ಹುಡುಕಿ ಬೋರ್‍ವೆಲ್ ವ್ಯವಸ್ಥೆ ಮಾಡಿಕೊಡಬೇಕು. ಬೋರ್‍ವೆಲ್ ವಿಫಲವಾದಲ್ಲಿ ತಕ್ಷಣ ತೆರೆದ ಬಾವಿಯನ್ನು ಅಗೆದು ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು. ಕುದ್ರಿಪದವು, ಕಟೀಲು ಗ್ರಾಮದಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಪ್ರತಿ ಬಾರಿ ಕಾರಣಗಳು ನೀಡುತ್ತಿದ್ದು, ಮುಂದಿನ ಸಭೆಯಲ್ಲಿ ಸಮಸ್ಯೆ ಬಗೆಹರಿಸಿ ಸಭೆಗೆ ಹಾಜರಾಗುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
ಉದ್ಯೋಗಿನಿ ಯೋಜನೆಯಡಿ 2019-20ನೇ ಸಾಲಿನಲ್ಲಿ 113 ಗುರಿಗಳನ್ನು ಹೊಂದಿದ್ದು, ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಫಲಾನುಭವಿಗಳಿಗೆ ಸಾಲ ಸೌಲಭ್ಯ ದೊರಕುವಂತೆ ಕೆಲಸ ಕಾರ್ಯವನ್ನು ಜರೂರಾಗಿ ನಿರ್ವಹಿಸಿ ಎಂದು ಸಭೆಯ ಅಧ್ಯಕ್ಷರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದಡಿಯಲ್ಲಿ 54 ಅರ್ಜಿಗಳು, ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಡಿ 57 ಅರ್ಜಿಗಳು ಆಯ್ಕೆಯಾಗಿ ಬ್ಯಾಂಕಿಗೆ ಆನ್ ಲೈನ್ ಮೂಲಕ ಶಿಫಾರಸು ಮಾಡಲಾಗಿರುತ್ತದೆ. ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ ಬ್ಯಾಂಕ್‍ಗಳಿಗೆ ಪ್ರಸ್ತಾವನೆ ಹೋಗಿದ್ದು, ಎಲ್ಲಾ ಬ್ಯಾಂಕ್‍ಗಳ ಪಟ್ಟಿ ಮಾಡಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತರುವಂತೆ ಮುಖ್ಯಕಾರ್ಯನಿರ್ವಹಣಾಧಿಕಾರಿ, ಕೆವಿಐ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಕಾರ್ಮಿಕರಿಗಾಗಿ ವಿಶೇಷ ಕಾರ್ಯಕ್ರಮಗಳಡಿ ವಿವಿಧ ಯೋಜನೆಗಳಿದ್ದು, ದ.ಕ ಜಿಲ್ಲೆಯಲ್ಲಿ ಒಟ್ಟು 60 ಸಾವಿರ ಕಟ್ಟಡ ಕಾರ್ಮಿಕರ ನೋಂದಣಿ ನಡೆದಿರುತ್ತದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು. ಕಟ್ಟಡ ಕಾರ್ಮಿಕ ಯೋಜನೆಯಡಿ ಶೈಕ್ಷಣಿಕ, ಆರೋಗ್ಯ, ಪೆನ್ಷನ್ ರೂಪದಲ್ಲಿ ಧನಸಹಾಯ ಮಾಡಲಾಗುತ್ತದೆ ಶೇಕಡಾ 100% ಸಾಧನೆಯಾಗಿರುತ್ತದೆ. ದ.ಕ ಜಿಲ್ಲೆಯಲ್ಲಿನ ಜನವರಿ ಮಾಹೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಶೇಕಡಾ 81% ರಷ್ಟು ಸಾಧನೆ, ಬಸವ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಶೇಕಡಾ 18.58% ರಷ್ಟು ಸಾಧನೆ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಶೇಕಡಾ 9.52 ಸಾಧನೆಯಾಗಿದ್ದು ಈ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ,. ಮತ್ತಿತರರು ಉಪಸ್ಥಿತರಿದ್ದರು.