(ನ್ಯೂಸ್ ಕಡಬ) newskadaba.com, ಮಂಗಳೂರು, ಜ.31 ಗ್ರಾಮೀಣ ಮಟ್ಟದಲ್ಲಿ ಕುಷ್ಠರೋಗ ನಿರ್ಮೂಲನೆಯ ಕುರಿತು ಜಾಗೃತಿ ಮೂಡಿಸಿ ಜನರಲ್ಲಿರುವ ಮೂಡನಂಬಿಕೆಯನ್ನು ಹೋಗಲಾಡಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಹೇಳಿದರು.
ದಕ್ಷಿಣ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕುಷ್ಠರೋಗ ವಿಭಾಗ) ಮಂಗಳೂರು ಮತ್ತು ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಇವರ ಸಹಯೋಗದೊಂದಿಗೆ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ. ಕಾನ್ಫರೆನ್ಸ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ – 2020 ಕುಷ್ಠರೋಗದ ವಿರುದ್ಧ ಅಂತಿಮ ಯುದ್ಧ ಘೋಷಣೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಷ್ಠರೋಗದ ಬಗೆಗಿರುವ ಮೂಡನಂಬಿಕೆಯನ್ನು ಹೋಗಲಾಡಿಸಿ, ಜನರಲ್ಲಿ ಜಾಗೃತಿಯ ಜೊತೆಗೆ ಆತ್ಮವಿಶ್ವಾಸ ಮೂಡಿಸುವುದು ಅಗತ್ಯ. ಕುಷ್ಠ ರೋಗದಿಂದ ದೈಹಿಕ ಅಂಗಾಂಗಳು ದೌರ್ಬಲಗೊಳ್ಳುತ್ತದೆ, ವಂಶಪಾರಂಪರ್ಯದಿಂದಾಗಿ ಈ ಕಾಯಿಲೆ ಕಂಡುಬಂದಿದೆ ಎನ್ನುವ ಜನರ ಮೂಡನಂಬಿಕೆ ಹಾಗೂ ತಪ್ಪಾದ ಮಾಹಿತಿ ನಾಗರಿಕರಲ್ಲಿ ತುಂಬಿಹೋಗಿದೆ ಇದನ್ನು ಹೋಗಲಾಡಿಸಬೇಕು. ಆದುದರಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಕುಷ್ಠರೋಗ ನಿರ್ಮೂಲನೆಯ ಬಗ್ಗೆ ಅರಿವು ಮೂಡಿಸಬಹುದು. ಈ ಮೂಲಕ ಕುಷ್ಠರೋಗ ಮುಕ್ತ ಸಮಾಜವನ್ನು ರೂಪಿಸಬಹುದು. ಇದಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಹೇಳಿದರು. ಕುಷ್ಠರೋಗಕ್ಕೆ ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯವಾಗಿ ಎಲ್ಲಾ ರೀತಿಯ ಚಿಕಿತ್ಸೆ ಇದೆ, ಆದರೆ ಜನರ ಮೂಢನಂಬಿಕೆಯಿಂದ ಈ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ವಿಫಲರಾಗಿದ್ದೇವೆ. ನಾವು ಸಾಮಾಜಿಕವಾಗಿ ಸಮಾಜದಲ್ಲಿ ಅರಿವು ಮೂಡಿಸಿ ಮೂಢನಂಬಿಕೆಯನ್ನು ಹೋಗಲಾಡಿಸಬೇಕು ಎಂದು ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರು ಡಾ. ಜೆಸಿಂತ್ ಕಾರ್ಯಕ್ರಮದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಹಾಗೂ ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಎಲುಬು ಮತ್ತು ಮೂಳೆ ಶಸ್ತ್ರ ಚಿಕಿತ್ಸಕ ಡಾ. ಜಗನ್ನಾಥ್ ಕಾಮತ್ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ರಾಜೇಶ್, ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ನವೀನ್ ಕುಮಾರ್ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ರತ್ನಾಕರ್ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.