ಶತಮಾನೋತ್ಸವ ಸಂಭ್ರಮದಲ್ಲಿ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ✍ ಸದಾನಂದ ಆಲಂಕಾರು

(ನ್ಯೂಸ್ ಕಡಬ) newskadaba.com, ಕಡಬ, ಜ.31    1919 ಆಲಂಕಾರು ಗ್ರಾಮಕ್ಕೆ ಶೈಕ್ಷಣಿಕ ವರ್ಷವಾಗಿ ಪರಿವರ್ತಿತಗೊಂಡ ವರ್ಷ ಗ್ರಾಮೀಣ ಪ್ರದೇಶದ ಅದೇಷ್ಟೋ ಜನರ ಭವಿಷ್ಯವನ್ನು ರೂಪಿಸಿದ ಆಲಂಕಾರು ಸರಕಾರಿ ಶಾಲೆಗೆ ಇದೀಗ ಶತಮಾನೋತ್ಸವದ ಸಂಭ್ರಮ. ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಿಸಿಕೊಟ್ಟ ಶರವೂರು ಲಕ್ಷ್ಮೀನಾರಾಯಣ ರಾವ್‍ರವರ ಆಲಂಕಾರು ಸರಕಾರಿ ಶಾಲೆಗೆ ಈ ವರ್ಷ ನೂರರ ಸಂಭ್ರಮ. ಕ್ರಿ.ಶ. 1919ರಂದು ಆರಂಭವಾದ ಶಾಲೆ ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದ್ದು, ಜಿಲ್ಲೆಯಲ್ಲೇ ಮಾದರಿ ಶಾಲೆಯಾಗಿ ರೂಪುಗೊಳಿಸಲು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ.
ಶರವೂರು ಶ್ರೀದುರ್ಗಾಪರಮೇಶ್ವರೀ ದೇವಾಲಯದ ರಥ ಬೀದಿಯಲ್ಲಿ 1919ರಲ್ಲಿ ಆರಂಭವಾದ ಶಾಲೆಯು ಹಲವು ಸಂಕಷ್ಟವನ್ನು ಎದುರಿಸಿಕೊಂಡು ಬೆಳೆದು ನಿಂತಿದೆ. ಆಲಂಕಾರು, ಪೆರಾಬೆ, ಕುಂತೂರು, ಹಳೆನೇರಂಕಿ, ರಾಮಕುಂಜ ಗ್ರಾಮಗಳ ವ್ಯಾಪ್ತಿಗೆ ಈ ಶಾಲೆಯು ಒಳಪಟ್ಟಿತ್ತು. ಆರಂಭದಲ್ಲಿ 40ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ತರಗತಿಗಳು ಆರಂಭವಾಗಿದ್ದವು. 1952ರಲ್ಲಿ ಆಲಂಕಾರು ಪೇಟೆಗೆ ಸ್ಥಳಾಂತರಗೊಂಡು ನಾರಾಯಣ ರಾವ್‍ರವರ ಬಾಡಿಗೆ ಕಟ್ಟಡದಲ್ಲಿ, ಬಳಿಕ ಪೇಟೆಯಲ್ಲಿರುವ ದೇವಾಲಯದ ಕಟ್ಟಡದಲ್ಲಿ 5ನೇ ತರಗತಿಯವರೆಗೆ ತರಗತಿಗಳು ನಡೆದುಕೊಂಡು ಬಂದಿತ್ತು. 1956ರಲ್ಲಿ ಮಹಾಲಕ್ಷ್ಮೀ ಅಮ್ಮನವರ ಮುಳಿ ಹುಲ್ಲಿನ ಕಟ್ಟಡದಲ್ಲಿ ಶಾಲಾ ತರಗತಿಗಳನ್ನು ಮುಂದುವರಿಸಲಾಯಿತು. ಇದೇ ವೇಳೆ ಪದ್ಮಾವತಿ ಅಮ್ಮನವರು ಶಾಲೆಯಲ್ಲಿ ಶಿಶುವಿಹಾರವನ್ನು ಸ್ಥಾಪಿಸಿ ಮುನ್ನಡೆಸಿದ ಮಹಿಳಾ ಸಾಧಕಿಯಾಗಿ ಗುರುತಿಸಿಕೊಂಡಿದ್ದರು. ಬಳಿಕ ಆಲಂಕಾರು ಮಂಡಲ ಪಂಚಾಯತ್ ಸರಕಾರಿ ಶಾಲೆಗೆ ಜಾಗವನ್ನು ಮಂಜೂರುಗೊಳಿಸಿ ಕಟ್ಟಡ ನಿರ್ಮಿಸಿ 7ನೇತರಗತಿಗೆ ಉನ್ನತೀಕರಿಸಿತು.

2012ರಲ್ಲಿ ಶತಮಾನೋತ್ಸವಕ್ಕೆ ಮುನ್ನುಡಿ
ಕಳೆದ ಏಳು ವರ್ಷಗಳಿಂದ ಶಾಲಾ ಶತಮಾನೋತ್ಸವ ಸಮಾರಂಭಕ್ಕೆ ಸಿದ್ದತೆ ನಡೆಸಲಾಗುತ್ತಿದೆ. 2011ರಲ್ಲಿ ಹಿರಿಯ ವಿದ್ಯಾರ್ಥಿಗಳ ಹಾಗೂ ಪೊಷಕರ ನೆರವಿನಲ್ಲಿ ಶಾಲಾ ವಾರ್ಷಿಕೋತ್ಸವ ನಡೆಸಿ ಉಳಿಕೆಯಾದ 80 ಸಾವಿರ ಮೊತ್ತವನ್ನು ಶಾಲಾ ಶತಮಾನೋತ್ಸವವಕ್ಕೆ ಮೂಲ ನಿಧಿಯನ್ನಾಗಿ ಬಳಸಿಕೊಳ್ಳಲಾಯಿತು. ಬಳಿಕದ ದಿನಗಳಲ್ಲಿ ಮುಖ್ಯ ಶಿಕ್ಷಕ ಕೆ.ಪಿ.ನಿಂಗರಾಜು ಹಾಗೂ ಶತಮಾನೋತ್ಸವ, ಕಟ್ಟಡ ಸಮಿತಿಗಳ ನೇತೃತ್ವದಲ್ಲಿ ಸರಕಾರದ ವಿವಿಧ ಅನುದಾನಗಳನ್ನು ದಾನಿಗಳ ನೆರವನ್ನು ಪಡೆದುಕೊಂಡು ಶಾಲಾ ರಂಗ ಮಂದಿರ, ಶಾಲಾ ನೂತನ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಮಾಡಲಾಗಿದೆ. ಪ್ರಸ್ತುತ ಶಾಲೆಯು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಕೆ.ಪಿ.ನಿಂಗರಾಜುರವರ ನೇತೃತ್ವದಲ್ಲಿ 10ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2.33ಎಕ್ರೆ ಆಸ್ತಿಯನ್ನು ಹೊಂದಿದ್ದು ಮೂರು ಕಟ್ಟಡಗಳು ಕ್ರೀಡಾಂಗಣ, ಶುದ್ದ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ, ಕಂಪ್ಯೂಟರ್ ತರಭೇತಿ ತರಗತಿ ಮೊದಲಾದ ಮೂಲಭೂತ ಸೌಕರ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಶತಮಾನೋತ್ಸವದ ಸವಿ ನೆನಪಿಗಾಗಿ ಸುಸಜ್ಜಿತ ಬಯಲು ರಂಗ ಮಂದಿರ, ಒಂದು ಹಂತಸ್ತಿನ ಕಟ್ಟಡ, ಭೋಜನ ಶಾಲೆ, ಕ್ರೀಡಾಂಗಣ ವಿಸ್ತರಣೇ ಮಾಡಲಾಗಿದೆ.
ಗ್ರಾಮಸ್ಥರಿಗೆ ಜಾತ್ರೆಯಂತೆ
ಕಳೆದ ಹಲವು ದಿನಗಳಿಂದ ಈ ಗ್ರಾಮದ ಜನತೆ ತಾವು ಕಲಿತ ಶಾಲೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಮಹಿಳೆಯರು ಶಾಲಾ ಅಂಗಳವನ್ನು ಶುಚಿಗೊಳಿಸಿ ಸೆಗಣಿ ಸಾರಿಸಿ ಅಪ್ಪಟ ಭಾರತೀಯ ಸಂಸ್ಕೃತಿಗೆ ಪೂರಕವಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಶಾಲಾ ಆವರಣ ಸೇರಿದಂತೆ ಪೇಟೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿದ್ದು ಊರ ದೇವಾಲಯದ ಜಾತ್ರೆಯಂತೆ ಎಲ್ಲೆಡೆ ಕಂಗೊಳಿಸುತ್ತಿದೆ. ಅಲ್ಲಲ್ಲಿ ಬೃಹತ್ ಗಾತ್ರದ ಬ್ಯಾನರ್‍ಗಳು ಶತಮಾನೋತ್ಸವ ಸಮಾರಂಭಕ್ಕೆ ಬರುವ ಜನತೆಯನ್ನು ಸ್ವಾಗತಿಸುತ್ತಿವೆ. ಗ್ರಾಮಸ್ಥರು ದೂರದ ಊರುಗಳಲ್ಲಿರುವ ತಮ್ಮ ಮಕ್ಕಳನ್ನು ಶಾಲಾ ಶತಮಾನೋತ್ಸವ ಸಮಾರಂಭದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ. ಅಲ್ಲದೆ ಶಾಲಾ ಶಿಕ್ಷಕ ವೃಂದ ತಮ್ಮ ಹಳೆ ವಿದ್ಯಾರ್ಥಿಗಳನ್ನು ದೂರವಾಣಿ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿದ್ದು ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ. ಜೊತೆಗೆ ಗ್ರಾಮಸ್ಥರು ತಮ್ಮ ನೆಂಟರಿಸ್ಟರನ್ನು ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದು ಒಟ್ಟಿನಲ್ಲಿ ಗ್ರಾಮದ ಜನತೆಗೆ ಶಾಲಾ ಶತಮಾನೋತ್ಸವ ಗ್ರಾಮದ ಜಾತ್ರೆಯಂತಾಗಿದೆ.
ಎಲ್ಲವು ಶಾಲಾ ಅಭಿಮಾನಿಗಳ ಕೊಡುಗೆಯಾಗಿದೆ. – ಕೆ.ಪಿ.ನಿಂಗರಾಜು ಮುಖ್ಯ ಶಿಕ್ಷಕರು
ಶತಮಾನೋತ್ಸವದ ಸವಿನೆನಪಿಗಾಗಿ ಗ್ರಾಮದ ಜನತೆಯ ಹಾಗೂ ದಾನಿಗಳ ಸಹಕಾರದೊಂದಿಗೆ 16ಲಕ್ಷ ರೂಪಯಿ ವೆಚ್ಚದಲ್ಲಿ ವ್ಯವಸ್ಥಿತ ರಂಗ ಮಂದಿರ ನಿರ್ಮಾಣ ಮಾಡಲಾಗಿದೆ. ಮಾತ್ರವಲ್ಲದೆ ಜನಪ್ರತಿನಿಧಿ ಹಾಗೂ ದಾನಿಗಳ ನೆರವಿನಿಂದ ಒಂದು ಕೊಠಡಿಯನ್ನು 21ಲಕ್ಷ ವೆಚ್ಚದಲ್ಲಿ ಹಾಗೂ ಮತ್ತೊಂದು ಕೊಠಡಿಯನ್ನು 15ಲಕ್ಷ ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕ ಎಸ್ ಅಂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜಿಲ್ಲಾ ಪಂಚಾಯತ್, ನೆರವಿನೊಂದಿಗೆ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ತಾಲೂಕು ಪಂಚಾಯತ್ ಅನುದಾನದಿಂದ ಶಾಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಸಲಾಗಿದೆ. ಶಾಲೆಗೆ ಆಕರ್ಷಕ ಬಣ್ಣ ಬಳಿದು ಗೋಡೆಯ ತುಂಬಾ ಚಿತ್ರಗಳನ್ನು ಬಿಡಿಸಲಾಗಿದೆ. ಆವರಣವನ್ನು ಹೂಕುಂಡ, ಹೂದೋಟದಿಂದ ಶೃಂಗರಿಸಲಾಗಿದೆ. ಸರ್ವಧರ್ಮ ಸಮನ್ವಯದ 7 ಬಣ್ಣಗಳ ಏಕತೆಯ ಧ್ವಜವನ್ನು ಹಾಕಲಾಗಿದೆ. 1ರಿಂದ 4ತರಗತಿಗೆ ಮೀಸಲಾಗಿರುವ ಗುಬ್ಬಚ್ಚಿ ಸ್ಪೀಕಿಂಗ್ ತರಗತಿಯನ್ನು 7ನೇ ತರಗತಿಯವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್, ಸೆಂಟೆನ್ಸ್ ಪ್ರಾಕ್ಟೀಸ್‍ನ 45ನಿಮಿಷದ ತರಗತಿಗಳನ್ನು ಪ್ರತಿದಿನ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆಯ ಜೀವನವನ್ನು ರೂಪಿಸುವ ಉದ್ದೇಶದಿಂದ ಟೈಲರಿಂಗ್ ತರಭೇತಿ ಜೊತೆಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ ಎಂದು ಮುಖ್ಯಗುರು ಪ್ರತಿಕ್ರಿಯಿಸಿದರು.

Also Read  ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಮಗುಚಿಬಿದ್ದ ಲಾರಿ ➤ ಸವಾರ ದುರ್ಮರಣ

error: Content is protected !!
Scroll to Top