ನೊಂದ ಮಹಿಳೆ ಮತ್ತು ಮಕ್ಕಳ ಆಪ್ತ ಸಮಾಲೋಚನೆಗಾಗಿ “ಆಸರೆ” ಎಂಬ ವಿಶೇಷ ಆಪ್ತ ಸಮಾಲೋಚನಾ ಕೇಂದ್ರ ಕಾರ್ಯಾರಂಭ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.30   28.01.2020 ರಂದು ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆ ಪುತ್ತೂರಿನಲ್ಲಿ ನೊಂದ ಮಹಿಳೆ ಮತ್ತು ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸುವ ನಿಟ್ಟಿನಲ್ಲಿ ತೆರೆಯಲಾಗಿರುವ ಆಸರೆ ಎಂಬ ವಿಶೇಷ ಆಪ್ತ ಸಮಾಲೋಚನಾ ಕೇಂದ್ರದ ಉದ್ಘಾಟನಾ ಸಮಾರಂಭ ನಡೆದಿರುತ್ತದೆ, ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಆಪ್ತ ಸಮಾಲೋಚನಾ ಕೇಂದ್ರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಯ ಗಣ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು, ಸ್ವ ಸಹಾಯ ಸಂಘ ಮತ್ತು ಇತರ ಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಆಸರೆ ವಿಶೇಷ ಆಪ್ತ ಸಮಾಲೋಚನಾ ಕೇಂದ್ರದಲ್ಲಿ ಮಕ್ಕಳ ಆಪ್ತ ಸಮಾಲೋಚನೆಗಾಗಿ  ಚಿಲಿಪಿಲಿ  ಎಂಬ ವಿಭಾಗ  ಹಾಗೂ ಮಹಿಳೆಯರಿಗೆ ಆಪ್ತಸಮಾಲೋಚನೆಗಾಗಿ  ಚಿಗುರು ಮತ್ತು  ಮಡಿಲು ಎಂಬ ಎರಡು ವಿಭಾಗಗಳನ್ನು ತೆರೆಯಲಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆ ಪುತ್ತೂರು ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಒಟ್ಟು 50 ಮಹಿಳಾ ಅಧಿಕಾರಿ/ಸಿಬ್ಬಂದಿಗಳಿಗೆ ಆತಂಕದಲ್ಲಿರುವ ಮಹಿಳೆ ಮತ್ತು ಮಕ್ಕಳ ಆಪ್ತ ಸಮಾಲೋಚನೆಯ ಮೂಲ ಕೌಶಲ್ಯಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ವಿಷಯ ಪರಿಣಿತರಿಂದ ಎರಡು ದಿನಗಳ ಕಾರ್ಯಗಾರವನ್ನು ನಡೆಸಿದ್ದು, ಈ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದ ಅಧಿಕಾರಿ/ಸಿಬ್ಬಂದಿಗಳ ಪೈಕಿ ಆಯ್ದ ಕೆಲವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.  ಈ ಆಪ್ತ ಸಮಾಲೋಚನಾ ಕೇಂದ್ರದಲ್ಲಿ
* ಪೊಲೀಸ್ ಠಾಣೆಗೆ ಬಂದ ನೊಂದ ಮಹಿಳೆ ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಕೌನ್ಸಿಲಿಂಗ್ ಕೇಂದ್ರದಲ್ಲಿ ಕುಳ್ಳಿರಿಸಿ ಅವರ ಸಮಸ್ಯೆಯನ್ನು ಆಲಿಸಿ ಬಗೆಹರಿಸುವ ಪ್ರಯತ್ನವನ್ನು ಹಾಗೂ ಆತ್ಮಸ್ಥೈರ್ಯವನ್ನು ತುಂಬಲಾಗುವುದು.
* ದೌರ್ಜನ್ಯಕ್ಕೊಳಗಾದ /ತೊಂದರೆಗೊಳಗಾದ ಮಹಿಳೆಯರು ಮತ್ತು ಮಕ್ಕಳು ದೂರು ನೀಡಲು ಠಾಣೆಗೆ ಬಂದಾಗ  ಅವರಿಗೆ ತೃಪ್ತಿಕರವಾದ ವಾತಾವರಣದಲ್ಲಿ ಅವರಿಗಾದ ತೊಂದರೆಯನ್ನು ವಿವರವಾಗಿ ತಿಳಿದುಕೊಂಡು ಕಾನೂನು ಕ್ರಮಕೈಗೊಳ್ಳಲಾಗುವುದು.
* ಕೌಟುಂಬಿಕ ಸಮಸ್ಯೆಯಿಂದ ಬಂದ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿ ಅವರ ಸಮಸ್ಯೆಯನ್ನು ಆಲಿಸಿ ಅವರ ಕೌಟುಂಬಿಕ ಜೀವನ ಉತ್ತಮಗೊಳಿಸಲು ಪ್ರಯತ್ನಿಸಲಾಗುವುದು.
ದೌರ್ಜನ್ಯಕ್ಕೊಳಗಾದ /ತೊಂದರೆಗೊಳಗಾದ ಮಹಿಳೆಯರು ಹಾಗೂ ಮಕ್ಕಳು ದೂರು ನೀಡಿ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿದಾರರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿ ತನಿಖೆಯ ಗುಣಮಟ್ಟವನ್ನು ಉತ್ತಮಗೊಳಿಸುವುದು. ಹಾಗೂ  ಮಾನ್ಯ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಸಹಾಯ ಮಾಡಲಾಗುವುದು. ಪ್ರತಿ ತಿಂಗಳು ನೊಂದ ಮಹಿಳೆ ಹಾಗೂ ಮಕ್ಕಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ತೊಡಗಿಸಿಕೊಂಡಿರುವ ಸಾಂತ್ವನ ಕೇಂದ್ರ, ಎನ್.ಜಿ.ಓ ಹಾಗೂ ಇತರ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದು ಸಭೆಯನ್ನು ನಡೆಸಲಾಗುವುದು. ಈಗಾಗಲೇ ಶಾಲಾ ಕಾಲೇಜುಗಳಿಗೆ ಪೊಲೀಸ್ ಸಮನ್ವಯ ಅಧಿಕಾರಿಗಳು (ಪಿ.ಸಿ.ಓ) ನೇಮಕವಾಗಿದ್ದು, ಆಯಾ ಶಾಲೆಗಳ ಮಕ್ಕಳಿಗೆ ಇರುವ ತೊಂದರೆಗಳನ್ನು ನಿವಾರಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ಕರೆಯಲಾಗುವುದು.

Also Read  ಪುತ್ತೂರು: ವಿಷ ಪದಾರ್ಥ ಸೇವಿಸಿ ನಗರಸಭೆ ಎಇಇ ಅಸ್ವಸ್ಥ

error: Content is protected !!
Scroll to Top