ಆಲಂಕಾರು ಶ್ರೀ ಭಾರತೀ ಶಾಲಾ ವಿದ್ಯಾರ್ಥಿಗಳ ವಿಶ್ವದಾಖಲೆ ಪ್ರದರ್ಶನ

(ನ್ಯೂಸ್ ಕಡಬ) newskadaba.com, ಕಡಬ, ಜ.29    ಕಡಬ ತಾಲೂಕಿನ ಆಲಂಕಾರು ಶ್ರೀ ಭಾರತಿ ಶಾಲಾ ವಿದ್ಯಾರ್ಥಿಗಳ ವಿಶ್ವ ದಾಖಲೆ ಪ್ರದರ್ಶನ ಕಾರ್ಯಕ್ರಮ ಸೋಮವಾರ ಶಾಲೆಯಲ್ಲಿ ನಡೆಯಿತು. ಮೆಮೊರೈಸಿಂಗ್ ಎಂಡ್ ರಿಕಾಲಿಂಗ್ ಝೀರೋ ಟು ಇನ್ಫಿನಿಟ್ ಕ್ಯಾಲೆಂಡರ್ ಎಂಬ ವಿಷಯದಲ್ಲಿ ಶಾಲಾ ಏಳನೇ ತರಗತಿ ವಿದ್ಯಾರ್ಥಿಗಳಾದ ಮೋಕ್ಷಿತ್, ನಿತಿನ್ ಹಾಗೂ ಮಧುಶ್ರೀ ಅವರು ರಿಕಾಲಿಂಗ್ ಇನ್ಫ್ಯೆನೈಟ್ ಗ್ರೆಗೋರಿಯನ್ ಕ್ಯಾಲೆಂಡರ್ ನಿಂದ ಆಯ್ಕೆ ಮಾಡಲಾದ ಇಸವಿ, ತಿಂಗಳು, ದಿನಾಂಕಕ್ಕೆ ಸರಿ ಹೊಂದುವ ವಾರವನ್ನು ಕರಾರುವಕ್ಕಾಗಿ ಕೇವಲ ಮೂರು ಸೆಕೆಂಡ್‍ಗಳಲ್ಲಿ ತಿಳಿಸುವ ಮೂಲಕ ತಮ್ಮ ಜ್ಞಾನಪ ಶಕ್ತಿಯನ್ನು ಪ್ರದರ್ಶಿಸಿದರು. ಅಂತರಾಷ್ಟ್ರೀಯ ಮಟ್ಟದ ಸ್ಮರಣಶಕ್ತಿ ತರಬೇತುದಾರ ಮೈಸೂರಿನ ರಾಕೆಶ್ ಮೋಹನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಸಾಧನೆಗಾಗಿ ಶಾಲೆಯ ಒಟ್ಟು 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಮೂರು ವಿದ್ಯಾರ್ಥಿಗಳು ಕೊನೆಯಲ್ಲಿ ಉಳಿದುಕೊಂಡು ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿಶ್ವದಾಖಲೆಗೆ ಸಿದ್ದಪಡಿಸಲಾಗಿದೆ.


ಆರಂಭದಲ್ಲಿ ಮೂರು ವಿದ್ಯಾರ್ಥಿಗಳಿಗೆ ತಜ್ಞರು ಅವರವರ ಹುಟ್ಟು ದಿನಾಂಕವನ್ನು ತಿಳಿಸಿದಾಗ ವಿದ್ಯಾರ್ಥಿಗಳು ತಕ್ಷಣ ಮೂರೇ ಸೆಕೆಂಡ್‍ನಲ್ಲಿ ಯಾವ ವಾರ ಎನ್ನುವುದನ್ನು ತಿಳಿಸಿದರು. ಗಜೆಟೆಡ್ ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ಸಮರ್ಪಕ ಉತ್ತರ ನೀಡಿ ಸೈ ಎನಿಸಿಕೊಂಡರು. ಬಳಿಕ ನೆರೆದಿದ್ದ ತಜ್ಞರು ಹಾಗೂ ಸಾರ್ವಜನಿಕರಿಂದ ಆದಿಯಿಂದ ಅಂತ್ಯದವರೆಗೆ ಎನ್ನುವ ವಿಚಾರದೊಂದಿಗೆ ಕ್ರಿಸ್ತ ಶಕ ಮತ್ತು ಕ್ರಿಸ್ತ ಪೂರ್ವ ಇಸವಿಗಳನ್ನೊಳಗೊಂಡ ಒಟ್ಟು 45 ಪ್ರಶ್ನೆಗಳನ್ನು ಸಂಗ್ರಹಿಸಿ ಒಬ್ಬ ವಿದ್ಯಾರ್ಥಿಗೆ ತಲಾ ಹದಿನೈದು ಪ್ರಶ್ನೆಯಂತೆ ನಿಗದಿಪಡಿಸಿ ವಿದ್ಯಾರ್ಥಿಗಳನ್ನು ಪ್ರಶ್ನಿಸಲಾಯಿತು. ಪ್ರಶ್ನಾ ಬೋರ್ಡ್‍ನ ಅನತಿ ದೂರದಲ್ಲಿ ಎಲ್‍ಇಡಿ ಹಾಕಿ ಕಂಪ್ಯೂಟರ್ ಮೂಲಕ ವಿದ್ಯಾರ್ಥಿಗಳಿಗೆ ಕೇಳುವ ಡಾಟಗಳನ್ನು ನಮೂದಿಸಿ ವಿದ್ಯಾರ್ಥಿಗಳು ಉತ್ತರಿಸಿದ ಬಳಿಕ ಕಂಪ್ಯೂಟರ್ ನಲ್ಲಿ ವಾರಗಳನ್ನು ಜಾಲಾಡಿ ಹುಡುಕಿ ನಮೂದಿಸಲಾಗುತ್ತಿತ್ತು. ಮೂರೂ ವಿದ್ಯಾರ್ಥಿಗಳು ತಲಾ ಹದಿನೈದು ಪ್ರಶ್ನೆಗಳಿಗೆ ನೀಡಿದ ಉತ್ತರ ಕಂಪ್ಯೂಟರ್ ನಲ್ಲಿ ತಲಾಶ್ ಮಾಡಿದಾಗ ಸರಿಯಾಗಿ ನಮೂದಾಗಿತ್ತು. ಬಳಿಕ ಪರ್ತಕರ್ತರನ್ನು ಉದ್ದೇಶಿ ಮಾತನಾಡಿದ ತರಬೇತುದಾರ ರಾಕೇಶ್ ಮೋಹನ್ ಕಳೆದ ಇಪ್ಪತ್ತು ವರ್ಷಗಳಿಂದ ಮೈಸೂರಿನ ಶ್ರೀ ಸಾಯಿ ಸಂಸ್ಥೆಯ ಮುಖಾಂತರ ದೇಶಾದ್ಯಂತ 20 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತನಕ 17 ವಿದ್ಯಾರ್ಥಿಗಳು ವಿವಿಧ ವಿಷಯದಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ಅವರೆಲ್ಲಾ ಆಂಗ್ಲ ಭಾಷೆಯಲ್ಲಿ ದಾಖಲೆ ಮಾಡಿದರೆ ಆಲಂಕಾರು ಶಾಲೆಯಲ್ಲಿ ಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ವಿಶ್ವದಾಖಲೆಗೆ ತಯಾರಿ ಮಾಡಲಾಗುತ್ತಿದೆ. ವೇದ ಗಣಿತ ಹಾಗೂ ಜ್ಞಾಪಕ ಶಕ್ತಿ ವಿದ್ಯಾರ್ಥಿಗಳಿಗೆ ಅತೀ ಮುಖ್ಯ. ವಿದ್ಯಾರ್ಥಿಗಳಿಗೆ ಇಂತಹ ತರಬೇತಿಗಳಿಂದ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಇತರ ಕಲಿಕಾ ವಿಚಾರಗಳಿಗೆ ಪ್ರಯೋಜನವಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಖಂಡಿತಾ ವಿಶ್ವದಾಖಲೆಗೆ ಅರ್ಹರಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಶಾಲಾ ಅಧ್ಯಕ್ಷ ಡಾ|ಸುರೇಶ್ ಕುಮಾರ್ ಕೂಡೂರು ಮಾತಾನಾಡಿ ನಮ್ಮ ಶಾಲಾ ವಿದ್ಯಾರ್ಥಿಗಳು ಈಗಾಗಲೇ ಅನೇಕ ವಿಷಗಳಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇಲ್ಲಿನ ಬಡ ವಿದ್ಯಾರ್ಥಿಗಳೂ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಆಶಯಕ್ಕೆ ರಾಕೇಶ್ ಮೋಹನ್ ಪೂರಕವಾಗಿ ಸ್ಪಂದಿಸಿ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಭಾಗವಹಿಸಿರುವ ಮೂರು ಜನ ವಿದ್ಯಾರ್ಥಿಗಳು ಕಡು ಬಡತನದಿಂದ ಬಂದವರು ಅವರ ಸಾಧನೆಗೆ ಸಂಸ್ಥೆ ಬೆನ್ನೆಲುಬಾಗಿ ನಿಲ್ಲುತ್ತದೆ, ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದರು. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಭಾದ ಪ್ರಧಾನ ಕಾರ್ಯದರ್ಶಿ ಡಾ| ಕೃಷ್ಣ ಭಟ್ ಕೊಂಕೋಡಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಈಶ್ವರ ಗೌಡ ಪಜ್ಜಡ್ಕ, ಮೈಸೂರಿನ ಸಾಯಿ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಮಿಲನ್, ನಿರ್ಣಾಯಕ ಅಧಿಕಾರಿಗಳಾಗಿ ಭಾಗವಹಿಸಿದ್ದ ಶ್ರೀ ರಾಮಕುಂಜೇಶ್ವರ ಪ,ಪೂ.ಕಾಲೇಜಿನ ಪ್ರಿನ್ಸಿಪಾಲ್ ಎಂ.ಸತೀಶ್ ಭಟ್, ಕಡಬ ಸರಕಾರಿ ಪ.ಪೂ ಕಾಲೇಜಿ ಪ್ರಿನ್ಸಿಪಾಲ್ ಜನಾರ್ಧನ, ಸಿಆರ್ ಪಿ ಪ್ರದೀಪ್ ಬಾಕಿಲ, ವಿದ್ಯಾಭಾರತಿಯ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಕುಂಡಡ್ಕ, ಆಡಳಿತ ಮಂಡಳಿಯ ಪ್ರಮುಖರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ಸುಂದರ ಗೌಡ ಕುಂಡಡ್ಕ, ಶ್ರೀಧರ ಬಲ್ಯಾಯ, ಶಿಕ್ಷಕ ಯಧುಶ್ರೀ ಆನೆಗುಂಡಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಹಾಸ ಕೆ.ಸಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಕನಕಲತಾ ಎಸ್.ಎನ್ ಭಟ್ ವಂದಿಸಿದರು.

Also Read  ಮಂಗಳೂರು: ನಾಲ್ವರ ಹಂತಕ ಪ್ರವೀಣ್ ಬಿಡುಗಡೆಗೆ ಸಿದ್ದತೆ ➤ ಸಂತ್ರಸ್ತರಿಂದ ಆಕ್ಷೇಪ

error: Content is protected !!
Scroll to Top