(ನ್ಯೂಸ್ ಕಡಬ) newskadaba.com, ಮಂಗಳೂರು, ಜ.29 ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿರುವ ವಿಕಲಚೇತನರ ಪ್ರಯೋಜನಕ್ಕಾಗಿ ಬಳಕೆಯಾಗುವ ವೀಲ್‍ಚೇರ್ ಗಳ ಪರಿಸ್ಥಿತಿ ಹೇಗಿದೆ, ಯಾವ ರೀತಿಯಲ್ಲಿ ಉಪಯೋಗವಾಗುತ್ತಿದೆ ಎಂಬುವುದನ್ನು ಪರಿಶೀಲಿಸಿ 15 ದಿವಸದೊಳಗೆ ಮಾಹಿತಿ ನೀಡಬೇಕು ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಸೂಚಿಸಿದ್ದಾರೆ.
ಅವರು ಮಂಗಳವಾರ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಯೋಜನೆಗಳ ಸುಗಮ ಕಾರ್ಯಾಚರಣೆ ಬಗ್ಗೆ ತಾಲೂಕು ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು. ವಿಕಲಚೇತನರ ಕುಂದು ಕೊರತೆ ನಿವಾರಣೆ ಸಮಿತಿಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಆದಾಯದ ಮಿತಿ ಇರುವುದರಿಂದ ವಿಕಲಚೇತರನರಿಗೆ ಪಿಂಚಣಿ ಸಿಗಲು ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದರು. ಎಂಡೋಸಲ್ಫಾನ್ ಪೀಡಿತರಿಗೆ ಆರೋಗ್ಯ ಇಲಾಖೆಯಿಂದ ಆಧಾರ್ ಕಾರ್ಡ್ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಅವರು ಸೂಚಿಸಿದರು. ಸರಕಾರದ ನೂತನ ಆದೇಶದಂತೆ ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ ನೀಡಲು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನೂತನ ಸಮಿತಿ ರಚನೆ ಮಾಡಿ ಸಭೆ ನಡೆಸಲಾಗುವುದು ಎಂದು ಹೇಳಿದರು. ನಗರದ ಕೆಲವು ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಗೋಚರಿಸುತ್ತಿದ್ದು, ಅಂತಹ ಸ್ಥಳಗಳಿಗೆ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಮಿತಿಯಡಿ 2018-19 ಸಾಲಿನಲ್ಲಿ ದಾಖಲೆಯಾದ ಪ್ರಕರಣಗಳಲ್ಲಿ ಒಟ್ಟು 59 ದಾವೆ ವ್ಯಾಜ್ಯಗಳು ದಾಖಲಾಗಿರುತ್ತದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ನೇರವಾಗಿ 21 ದಾವೆಗಳು ದಾಖಲಾಗಿದ್ದು, ಉಳಿದ 38 ಪ್ರಕರಣ ನ್ಯಾಯಾಲಯಕ್ಕೆ ನೇರವಾಗಿ ಸಲ್ಲಿಸಲಾಗಿದೆ. ಕಚೇರಿಗೆ ದಾಖಲಾದ ಪ್ರಕರಣಗಳ ಪೈಕಿ 15 ಪ್ರಕರಣ ಸಮಾಲೋಚನೆಯ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಭೆಯಲ್ಲಿ ತಿಳಿಸಿದರು. ಭಾಗ್ಯಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಬಾಂಡ್ ಬರುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು. ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಯಡಿ ಗ್ರಾಮೀಣ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿರುವ ಬಗ್ಗೆ ತಿಳಿಸಲಾಯಿತು. ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್, ಶಿಶು ಅಭಿವೃದ್ಧಿ ಯೋಜನೆ ಪ್ರತಿನಿಧಿಗಳು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.