(ನ್ಯೂಸ್ ಕಡಬ) newskadaba.com, ಕಡಬ, ಜ.25 ನೂಜಿಬಾಳ್ತಿಲ ಗ್ರಾಮದ ತೀವ್ರ ಹದಗೆಟ್ಟಿದ್ದ ಬದಿಬಾಗಿಲು-ಒರುಂಬಾಲು ರಸ್ತೆಗೆ ಶಾಸಕರ 15 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಕಾಂಕ್ರೀಟ್ ಕಾಮಗಾರಿಗೆ ಶುಕ್ರವಾರ ಸುಳ್ಯ ಶಾಸಕ ಎಸ್.ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು.
ಹಿರಿಯರಾದ ದೇಜಪ್ಪ ಪೂಜಾರಿ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು. ಶಾಸಕ ಎಸ್.ಅಂಗಾರ ತೆಂಗಿನ ಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 1994ರ ಬಳಿಕ ಸುಮಾರು 25 ವರ್ಷಗಳ ಬಳಿಕ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದು ಬದಲಾವಣೆಗಳಾಗಿವೆ. ಈ ಭಾಗದ ವಿವಿಧ ರಸ್ತೆಗಳನ್ನು ವಿವಿಧ ಯೋಜನೆಗಳಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸರಕಾರಕ್ಕೆ ಇಚ್ಛಾಶಕ್ತಿಯಿದ್ದಲ್ಲಿ ಅಭಿವೃದ್ಧಿ ಸಾಧ್ಯ. ಸರಕಾರ ಹಣ ನೀಡಿದ್ದಲ್ಲಿ ಮಾತ್ರ ಚುನಾಯಿತ ಪ್ರತಿನಿಧಿಗಳಿಂದ ಕೆಲಸ ನಡೆಸಲು ಸಾಧ್ಯವಾಗಲಿದೆ. ಅಭಿವೃದ್ಧಿ ಕೆಲಸಗಳು ನಡೆಯಲು ಗ್ರಾಮಸ್ಥರು ಸಹಕರಿಸಬೇಕು. ಈ ರಸ್ತೆಗೆ ಮುಂದಿನ ಹಂತದ ಅನುದಾನವನ್ನು ಫೆಬ್ರವರಿ ಬಳಿಕ ನೀಡುವ ಭರವಸೆ ನೀಡಿ, ಮುಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸದ್ರಿ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದರು. ಜನಪ್ರತಿನಿಧಿಗಳು ರಸ್ತೆಯನ್ನು ಸರಕಾರದ ಅನುದಾನದಿಂದ ಅಭಿವೃದ್ಧಿ ಪಡಿಸುತ್ತಾರೆ. ಸಾರ್ವಜನಿಕರು ಚರಂಡಿಗಳನ್ನು ಬಂದ್ ಮಾಡಿದಲ್ಲಿ, ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆಗಳು ದುಸ್ತರಗೊಳ್ಳತ್ತವೆ. ಆದ್ದರಿಂದ ಚರಂಡಿಗಳನ್ನು ಬಂದ್ ಮಾಡದಂತೆ ಶಾಸಕರು ಕೇಳಿಕೊಂಡರು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ಹಲವು ವರ್ಷಗಳಿಂದ ಈ ಭಾಗದಲ್ಲಿ ಅಧಿಕಾರದಲ್ಲಿದ್ದ ಪ್ರತಿನಿಧಿಗಳು ಆಶ್ವಾಸನೆ ನೀಡಿ ಭರವಸೆ ಈಡೇರಿಸಿಲ್ಲ. ಬಿಜೆಪಿ ಸರಕಾರ ಬಂದ ಬಳಿಕ ನೂಜಿಬಾಳ್ತಿಲ ಸಂಪರ್ಕಿಸುವ ಹೆಚ್ಚಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ತಾ.ಪಂ. ಸದಸ್ಯೆ ಪಿ.ವೈ.ಕುಸುಮ, ಎಪಿಎಂಸಿ ನಿರ್ದೇಶಕರಾದ ಪುಲಸ್ತ್ಯಾ ರೈ, ಮೇದಪ್ಪ ಡೆಪ್ಪುಣಿ, ಗ್ರಾ.ಪಂ. ಸದಸ್ಯರಾದ ರಾಮಚಂದ್ರ ಎಸ್., ಜಾನಕಿ ಕುಂಟೋಡಿ, ಪ್ರಮುಖರಾದ ವಾಡ್ಯಪ್ಪ ಗೌಡ, ಭಾಸ್ಕರ ಗೌಡ ಇಚ್ಲಂಪಾಡಿ, ಚಂದ್ರಶೇಖರ ನೂಜಿ, ಡಾ.ಬೇಬಿಮ್ಯಾಥ್ಯು, ಜಯಂತ್ ಬರೆಮೇಲು, ಉಮೇಶ್ ಜಾಲು, ಉಮೇಶ್ ಶೆಟ್ಟಿ ಸಾಯಿರಾಮ್, ಹರಿಶ್ಚಂದ್ರ ಪೂಜಾರಿ, ಸಂದೇಶ್ ಪಳೆಮಜಲು, ಯಶವಂತ ಕಲ್ಲುಗುಡ್ಡೆ, ಲತೀಶ್ ಕಂಪ, ಜೋಸ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ರೀಧರ ಪೂಜಾರಿ ಕಂಪ ಸ್ವಾಗತಿಸಿದರು.