ಕೃಷಿ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ – ಶಾಸಕ ಡಿ. ವೇದವ್ಯಾಸ ಕಾಮತ್

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25   ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ಜನರು  ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹಾಗೂ ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ  ತೋಟಗಾರಿಕಾ ಇಲಾಖೆ ಯಶಸ್ವಿಯಾದ ಕಾರ್ಯಕ್ರಮ ಆಯೋಜಿಸಿದೆ ಎಂದು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ(ರಿ), ಮಂಗಳೂರು ಇತರ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಕದ್ರಿ ಉದ್ಯಾವನದಲ್ಲಿ ಆಯೋಜಿಸಿದ್ದ ಫಲಪುಪ್ಷ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಜೇನು ಕೃಷಿ, ಅಣಬೆ ಕೃಷಿ, ಹೀಗೆ ಇನ್ನಿತರ ಕೃಷಿಗೆ ಸಂಬಂಧಪಟ್ಟ ವಸ್ತುಗಳನ್ನು ಇಟ್ಟುಕೊಂಡು ಒಳ್ಳೆಯ ಮಾರಾಟ ಕೇಂದ್ರವನ್ನಾಗಿಸಿ,  ಜನರಿಗೆ ಪೂರಕ ವಾತಾವರಣವನ್ನು ಇಲಾಖೆ ಕಲ್ಪಿಸಿದೆ. ಇದನ್ನು ನಗರದ ಹೆಚ್ಚಿನ ಜನರು ಸದುಪಯೋಗಪಡಿಸಿಕೊಳ್ಳಬೇಕು. ಜೊತೆಗೆ ಕೃಷಿಯಲ್ಲಿ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದರು. ಎರಡು ದಿನದ ಈ ಕಾರ್ಯಕ್ರಮದಲ್ಲಿ  ಅತ್ಯಧಿಕ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಪ್ರದರ್ಶನದಲ್ಲಿ 134 ಅಧಿಕ ಸರಕಾರಿ ಅಭಿವೃದ್ಧಿ ಇಲಾಖೆಗಳು  ಹಾಗೂ ಖಾಸಗಿ ಸಂಸ್ಥೆಗಳಿಂದ ತೋಟಗಾರಿಕೆಗೆ ಸಂಬಂಧಿಸಿದ ಮಳಿಗೆಗಳು, ನರ್ಸರಿಗಳು, ತೋಟಗಾರಿಕೆಯಲ್ಲಿ ಬಳಸುವ  ಯಂತ್ರೋಪಕರಣಗಳ  ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಯಿತು. ವಿವಿಧ ಹೂಗಳಿಂದ ಅಲಂಕರಿಸಿರುವ ಆಕರ್ಷಕ ವಿನ್ಯಾಸ, ತೋಟಗಾರಿಕಾ ಇಲಾಖೆ ಬೆಳೆಸಿರುವ ವಿವಿಧ  ಜಾತಿಯ  ಪುಷ್ಪಗಳ ಪ್ರದರ್ಶನ, ಮಾದರಿ ಕೈತೋಟ ಪ್ರಾತ್ಯಕ್ಷತೆ ಹಾಗೂ ತರಕಾರಿ, ಹೂ ಸಸಿಗಳ ಮಾರಾಟ,  ಜೇನಿನ ವಿವಿಧ ತಳಿಗಳು, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಜೇನು ಔಷಧೀಯ ಗುಣಗಳ ಬಗ್ಗೆ ಮಾಹಿತಿ, ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಿಸಲಾದ ತೋಟಗಾರಿಕೆ ಗಿಡಗಳ ಮಾರಾಟ ಇವುಗಳು ಫಲಪುಷ್ಪ ಪ್ರದರ್ಶನದ ಆಕರ್ಷಣೆಯ ಕೇಂದ್ರಗಳಾಗಿದ್ದವು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ದ.ಕ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಸೆಲ್ವಮಣಿ ಆರ್, ತೋಟಗಾರಿಕೆ ಜಂಟಿ ನಿರ್ದೇಶಕ ಶಕೀಲ್ ಅಹಮ್ಮದ್, ಮೈಸೂರು ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ನಾಗರಾಜ್ ಎಚ್.ಎಂ ಕದ್ರಿ ವಾರ್ಡ್ ಕಾರ್ಪೋರೇಟರ್  ಶಕೀಲ ಕಾವ ಹಾಗೂ ಇನ್ನಿತರು ಉಪಸ್ಥಿತರಿದ್ದರು.

Also Read  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ ಮೂಲದ ವ್ಯಕ್ತಿಯ ಬಂಧನ..!

error: Content is protected !!
Scroll to Top