“ಇಂಗ್ಲೀಷ್” ಹಾಗೂ “ರಾಹುಕಾಲ ಗುಳಿಗಕಾಲ” ತುಳು ಸಿನಿಮಾ ಬಿಡುಗಡೆ ವಿವಾದಕ್ಕೆ ತೆರೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.24    ಆಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ” ಇಂಗ್ಲೀಷ್” ತುಳು ಸಿನಿಮಾ ಹಾಗೂ ಜಲನಿಧಿ ಫಿಲಂಸನವರ ಅನಿಲ್ ರಾಜ್ ಹಾಗೂ ಲೋಕೇಶ್ ಕುಮಾರ್ ನಿರ್ಮಾಣದ ಸೂರಜ್ ಬೋಳಾರ್ ನಿರ್ದೇಶನದ “ರಾಹುಕಾಲ ಗುಳಿಗಕಾಲ” ತುಳು ಸಿನಿಮಾ ಬಿಡುಗಡೆ ದಿನಾಂಕದ ವಿವಾದವು ಸೌಹಾರ್ಧಯುತವಾಗಿ ಬಗೆ ಹರಿದಿದೆ ಎಂದು ಎರಡೂ ಚಿತ್ರದ ನಿರ್ಮಾಪಕರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಆಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ಮಾರ್ಚ್ – 22, “ಯಾಣ”. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಮೊದಲಾದ ಕನ್ನಡ ಚಲನಚಿತ್ರದ ನಿರ್ಮಾಪಕರಾದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸುತ್ತಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ” ಇಂಗ್ಲೀಷ್” ತುಳು ಸಿನಿಮಾ ಹಾಗೂ ಜಲನಿಧಿ ಫಿಲಂಸನವರ ಜಬರ್ ದಸ್ತ್ ಶಂಕರ ಚಿತ್ರದ ನಿರ್ಮಾಪಕರಾದ ಅನಿಲ್ ರಾಜ್ ಹಾಗೂ ಲೋಕೇಶ್ ಕುಮಾರ್ ನಿರ್ಮಾಣದ ಸೂರಜ್ ಬೋಳಾರ್ ನಿರ್ದೇಶನದ “ರಾಹುಕಾಲ ಗುಳಿಗಕಾಲ” ತುಳು ಸಿನಿಮಾ ಎಪ್ರಿಲ್ 3ರಂದು ಒಂದೇ ದಿನಾಂಕದಂದು ಬಿಡುಗಡೆಗೆ ಸಿದ್ದತೆ ನಡೆಸಿತ್ತು. ಈ ವಿವಾದದ ಬಗ್ಗೆ ಮಾಹಿತಿ ನೀಡಲು ಎರಡೂ ಚಿತ್ರದ ನಿರ್ಮಾಪಕರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೀಷ್” ಚಿತ್ರದ ನಿರ್ಮಾಪಕ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮಾತನಾಡಿ, ಈಗಾಗಲೇ ಕನ್ನಡದಲ್ಲಿ ಮೂರು ಚಿತ್ರಗಳನ್ನು ನಿರ್ಮಿಸಿರುವ ತಾನು ನನ್ನ ಮಾತೃ ಭಾಷೆ ತುಳುವಿನ ಮೇಲಿನ ಅಭಿಮಾನದಿಂದ ಒಂದು ಉತ್ತಮ ಕಥಾಹಂದರವುಳ್ಳ ಚಿತ್ರವನ್ನು ನಿರ್ಮಿಸಿದ್ದೇನೆ. ನಾನು ಹೆಚ್ಚಾಗಿ ದುಬೈಯಲ್ಲೇ ಇರುವುದರಿಂದ ಇಲ್ಲಿನ ಸ್ಥಳೀಯ ಚಿತ್ರಗಳ ಬೆಳವಣಿಗೆಗಳ ಬಗ್ಗೆ ಹೆಚ್ಚು ಮಾಹಿತಿ ಇರದ ಹಿನ್ನೆಲೆಯಲ್ಲಿ ಚಿತ್ರ ತಂಡದ ತೀರ್ಮಾನದಂತೆ ಎಪ್ರಿಲ್ 3ರಂದು ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದೇವು. ಆದರೆ ಇದೀಗ ಇದೇ ತಾರೀಕಿನಂದು “ರಾಹುಕಾಲ ಗುಳಿಗಕಾಲ” ತುಳು ಸಿನಿಮಾ ಕೂಡ ಬಿಡುಗಡೆಗೆ ಸಿದ್ದತೆ ನಡೆಸಿರುವ ಬಗ್ಗೆ ಮಾಹಿತಿ ಲಭಿಸಿತು. ಕರಾವಳಿಯಲ್ಲಿ ತುಳು ಚಿತ್ರಕ್ಕೆ ಸೀಮಿತ ಮಾರುಕಟ್ಟೆ ಇರುವುದರಿಂದ ಎರಡೂ ತುಳುಚಿತ್ರಗಳು ಒಟ್ಟಿಗೆ ತೆರೆಕಂಡರೆ ಚಿತ್ರದ ಯಶಸ್ಸಿಗೆ ಹಾನಿಯಾಗಬಹುದು. ಮಾತ್ರವಲ್ಲದೇ ಇದರಿಂದ ಕಲಾವಿದರಿಗೂ ತೊಂದರೆಯಾಗಬಹುದೆಂಬ ತುಳು ಚಿತ್ರದ ಕಾಳಜಿಯಿಂದ ನಾನು ಸ್ವತಹ “ರಾಹುಕಾಲ ಗುಳಿಗಕಾಲ” ತಂಡದೊಂದಿಗೆ ಮಾತನಾಡಿ ಎರಡೂ ಚಿತ್ರಕ್ಕೂ ಯಾವೂದೇ ರೀತಿಯಲ್ಲಿ ತೊಂದರೆಯಾಗದಂತೆ ಚಿತ್ರವನ್ನು ಬೇರೆ ಬೇರೆ ದಿನದಂದು ಬಿಡುಗಡೆ ಮಾಡುವ ಬಗ್ಗೆ ಮನವಿ ಮಾಡಿದ್ದೆ. ಅದರಂತೆ ಅವರು (ನಿರ್ಮಾಪಕರು) ತುಳು ಚಿತ್ರದ ಮುಂದಿನ ಬೆಳವಣಿಗೆಯ ಹಿತದೃಷ್ಠಿಯಿಂದ ದಿನಾಂಕ ಬದಲಾವಣೆಗೆ ಒಪ್ಪಿಕೊಡಿದ್ದಾರೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಇಂಗ್ಲಿಷ್” ತುಳು ಚಿತ್ರ ಎಪ್ರಿಲ್ ಮೊದಲ ವಾರದಲ್ಲಿ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಪುಣೆ, ಮುಂಬೈ ಹಾಗೂ ಗಲ್ಫ್‌ ರಾಷ್ಟ್ರಗಳಲ್ಲಿ ಏಕಕಾಲದಲ್ಲೇ ತೆರೆಕಾಣಲಿದೆ. ಚಿತ್ರಪ್ರೇಮಿಗಳಿಗೆ ಉತ್ತಮವಾದ ಕಥೆ ಹಾಗೂ ಕ್ವಾಲಿಟಿ ಚಿತ್ರ ನೀಡಬೇಕೆಂಬ ಉದ್ದೇಶದಿಂದ ಅದ್ಧೂರಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.ಚಿತ್ರದ ಯಶಸ್ಸಿಗೆ ಪತ್ರಿಕಾ ಮಾಧ್ಯಮದವರ ಸಹಕಾರ ಕೂಡ ಅಗತ್ಯ. ಹಾಗಾಗಿ ಎಲ್ಲಾ ಮಾಧ್ಯಮ ಮಿತ್ರರು ಚಿತ್ರವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ ಹರೀಶ್ ಶೇರಿಗಾರ್ ಅವರು ಅದೇ ರೀತಿ ಚಿತ್ರದ ಬಿಡುಗಡೆ ದಿನದ ವಿವಾದವನ್ನು ಸೌಹಾರ್ಧಯುತವಾಗಿ ಬಗೆಹರಿಯಲು ಸಹಕಾರ ನೀಡಿದ “ರಾಹುಕಾಲ ಗುಳಿಗಕಾಲ” ಚಿತ್ರದ ನಿರ್ಮಾಪಕರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

Also Read  ಬ್ರಿಟನ್‌ ನಲ್ಲಿ ಆತಂಕ ಸೃಷ್ಟಿಸಿದ ಕೊರೊನಾ ರೂಪಾಂತರಿ..!

“ರಾಹುಕಾಲ ಗುಳಿಗಕಾಲ” ಚಿತ್ರದ ನಿರ್ಮಾಪಕ ಅನಿಲ್ ರಾಜ್ ಅವರು ಮಾತನಾಡಿ. ಒಂದು ತುಳು ಚಿತ್ರ ಒಟ್ಟಿಗೆ ಬಿಡುಗಡೆಯಾದರೆ ಚಿತ್ರದ ನಿರ್ಮಾಪಕರು ಮಾತ್ರವಲ್ಲದೇ ಕಲಾವಿದರಿಗೂ ತೊಂದರೆ. ತುಳು ಇಂಡಸ್ಟ್ರಿ ಸೋತರೆ, ತುಳು ಭಾಷೆ ಸೋತ ಹಾಗೆ. ಈ ಹಿನ್ನೆಲೆಯಲ್ಲಿ ಇಂಥಹ ಸಂದರ್ಭಗಳಲ್ಲಿ ಚಿತ್ರದ ನಿರ್ಮಾಪಕರು ಒಟ್ಟಿಗೆ ಕುಳಿತು ಮಾತನಾಡಿ ಒಂದು ಒಳ್ಳೆಯ ನಿರ್ಧಾರಕ್ಕೆ ಬರಬೇಕು. ತುಳು ಭಾಷೆಯ ಅಭಿಮಾನದಿಂದ ಇಂಗ್ಲೀಷ್” ಚಿತ್ರದ ನಿರ್ಮಾಪಕರಾದ ಹರೀಶ್ ಶೇರಿಗಾರ್ ಅವರು ದೂರದ ದುಬೈಯಿಂದ ಇಲ್ಲಿಗೆ ಬಂದು ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಿರುವುದು ನಮಗೆ ತುಂಬಾ ಸಂತೋಷವಾಗಿದೆ. ಅವರ ತುಳುವಿನ ಅಭಿಮಾನಕ್ಕಾಗಿ ನಾವು ನಮ್ಮ ಸಿನಿಮಾದ ದಿನಾಂಕ ಬದಲಾವಣೆಗೆ ಸಂತೋಷದಿಂದ ಒಪ್ಪಿಕೊಂಡಿದ್ದೇವೆ. ಒಟ್ಟಿನಲ್ಲಿ ತುಳು ಭಾಷೆಯ ಜೊತೆಜೊತೆಗೆ ತುಳು ಸಿನಿಮಾವು ಬೆಳೆಯಬೇಕು, ಉಳಿಯಬೇಕು ಎಂದು ಹೇಳಿದರು. “ರಾಹುಕಾಲ ಗುಳಿಗಕಾಲ” ಚಿತ್ರದ ಮತ್ತೋರ್ವ ನಿರ್ಮಾಪಕ ರಾಜೇಶ್ ಕುಡ್ಲ ಅವರು ಮಾತನಾಡಿ, ಈ ರೀತಿಯ ಸಮಸ್ಯೆಗಳು ಬಂದಾಗ ಒಟ್ಟು ಕುಳಿತು ಸಮಸ್ಯೆ ಬಗೆಹರಿಸುವುದರಿಂದ ಚಿತ್ರರಂಗ ಎತ್ತರಕ್ಕೆ ಬೆಳೆಯಲು ಸಾಧ್ಯ. ಸಂಘರ್ಷಗಳು ಎನೇ ಇದ್ದರು ಅದನ್ನು ಬಗೆಹರಿಸಿಕೊಂಡು ಮುಂದೆ ಹೋಗಬೇಕು. ತುಳು ಚಿತ್ರದ ಮೇಲಿನ ಕಾಳಜಿಯಿಂದ ಹರೀಶ್ ಶೇರಿಗಾರ್ ಅವರು ದುಬೈಯಿಂದ ಬಂದು ನಮ್ಮ ಜೊತೆ ಕುಳಿತು ಸಮಸ್ಯೆ ಬಗೆಹರಿಸುವಲ್ಲಿ ಸಹಕರಿಸಿದ್ದಾರೆ. ತುಳು ಚಿತ್ರದ ಹೆಚ್ಚಿನ ನಿರ್ಮಾಪಕರು ಈ ರೀತಿಯ ಮನೋಭಾವ ಬೆಳೆಸಿಕೊಂಡರೆ ತುಳು ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು. ಇಂಥಹ ವಿವಾದಗಳು ಬಂದಾಗ ತುಳು ಚಿತ್ರ ನಿರ್ಮಾಪಕರ ಸಂಘಕ್ಕೆ ದೂರು ನೀಡಿ ವಿವಾದ ಬಗೆಹರಿಸಬಹುದಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜೇಶ್ ಕುಡ್ಲ ಅವರು, ರಾಹುಕಾಲ ಗುಳಿಗಕಾಲ” ಚಿತ್ರದ ನಿರ್ಮಾಪಕರಾದ ನಾವು ಇಲ್ಲಿನ ತುಳು ಚಿತ್ರ ನಿರ್ಮಾಪಕರ ಸಂಘದ ಸದಸ್ಯತ್ವವನ್ನು ಇನ್ನೂ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಮಂಗಳೂರಿನಲ್ಲಿ ತುಳು ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಇದೆ. ಮಾಲ್ ಗಳಲ್ಲಿ ಎಷ್ಟೇ ಟಾಕೀಸ್ ಗಳಿದ್ದರೂ ತುಳು ಚಿತ್ರಕ್ಕೆ ಸಿಂಗಲ್ ಥಿಯೇಟರ್ ನ ಅಗತ್ಯವಿದೆ. ಸದ್ಯಕ್ಕೆ ಎಲ್ಲರೂ ಜ್ಯೋತಿ ಚಿತ್ರ ಮಂದಿರದ ಬೆನ್ನು ಬಿದ್ದಿದ್ದಾರೆ. ಈ ಹಿಂದೆ ಸುಚಿತ್ರ ಹಾಗೂ ಪ್ರಭಾತ್ ಚಿತ್ರ ಮಂದಿರಗಳಲ್ಲಿ ತುಳು ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ ಈ ಎರಡು ಚಿತ್ರಮಂದಿರಗಳು ನವೀಕರಣಗೊಂಡು ಹವಾನಿಯಂತ್ರಿತಗೊಂಡ ಮೇಲೆ ತುಳು ಚಿತ್ರಕ್ಕೆ ಲಭ್ಯವಾಗುತ್ತಿಲ್ಲ. ಈ ಎರಡು ಚಿತ್ರಮಂದಿರಗಳು ತುಳು ಚಿತ್ರಗಳಿಗೆ ಲಭಿಸಿದರೆ ಈ ರೀತಿಯ ಸಣ್ಣಪುಟ್ಟ ವಿವಾದಗಳು ಪರಿಹಾರವಾಗುವ ಬಗ್ಗೆ ವಿಶ್ವಾಸವಿದೆ. ಈ ಬಗ್ಗೆ ಪತ್ರಕರ್ತರು ತಮ್ಮ ಮಾಧ್ಯಮಗಳಲ್ಲಿ ಧ್ವನಿ ಎತ್ತುವ (ಲೇಖನದ ) ಮೂಲಕ ತುಳು ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದು ಮೂವರು ನಿರ್ಮಾಪಕರು ಅಭಿಪ್ರಾಯಪಟ್ಟರು.

Also Read  ಪೇಜಾವರ ಶ್ರೀಗಳಿಂದ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ

error: Content is protected !!
Scroll to Top