(ನ್ಯೂಸ್ ಕಡಬ) newskadaba.com, ಮಂಗಳೂರು, ಜ.24 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಕಾದಿರಿಸಲಾಗುವ ಎಸ್‍ಸಿಪಿ ಹಾಗೂ ಟಿಎಸ್‍ಪಿ ಅನುದಾನ ಸಕಾಲದಲ್ಲಿ ಖರ್ಚು ಮಾಡದಿದ್ದರೆ, ಆಯಾ ಇಲಾಖೆಗಳ ಅಧಿಕಾರಿಗಳ ನೇರ ಹೊಣೆಗಾರರಾಗಲಿದ್ದು, ದಂಡನೀಯ ಕ್ರಮಗಳನ್ನು ಎದುರುಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಎಚ್ಚರಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2019-20ನೇ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರವು ಪರಿಶಿಷ್ಟರ ಅಭಿವೃದ್ಧಿಗಾಗಿ ಹಲವಾರು ಯೋಜನೆ ಮತ್ತು ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡುತ್ತಿದೆ, ಅದರ ಉಪಯೋಗವನ್ನು ಸಂಬಂಧಿಸಿದವರು ಪಡೆದುಕೊಳ್ಳಬೇಕು. ಇದರ ಜೊತೆಗೆ ಅಧಿಕಾರಿಗಳು ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕು ಎಂದರು. ಕೆಲವೊಂದು ಭಾಗದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯ ಅನುದಾನವನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿದ್ದಾರೆ. ಅಂತಹ ಅಧಿಕಾರಿಗಳು ಅದಷ್ಟು ಬೇಗನೆ ಎಚ್ಚೆತ್ತುಕೊಂಡು ಅಭಿವೃದ್ಧಿಯ ಕಡೆಗೆ ಸಾಗಬೇಕು ಎಂದು ಸಲಹೆ ನೀಡಿದರು. ಪ.ಜಾ/ ಪ.ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಹಾರಧನ ಪಡೆಯಲು ಜಾತಿ ಪ್ರಮಾಣ ಪತ್ರದಲ್ಲಿ ಆರ್.ಡಿ ನಂಬರ್ ಇಲ್ಲವಾದ್ದರಿಂದ ನೊಂದ ಸಂತ್ರಸ್ಥರು ಪರಿಹಾರಧನ ಪಡೆಯಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ಕೂಡಲೇ ಜಾತಿ ಪ್ರಮಾಣ ಪತ್ರದಲ್ಲಿ ಆರ್.ಡಿ ನಂಬರ್ ನಮೂದಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು. ಜಿಲ್ಲೆಯಲ್ಲಿ ಪ.ಜಾ/ ಪ.ಪಂಗಡದ ಗ್ರಾಮೀಣ ಕುಟುಂಬಗಳಿಗೆ ಸಂಬಂಧಿತ ಶೌಚಾಲಯಗಳು ಅದಷ್ಟು ಬೇಗ ನಿರ್ಮಾಣವಾಗಬೇಕಾಗಿದೆ. ಜಿಲ್ಲೆಯಲ್ಲಿ ಖಾಲಿ ಇರುವ ಜಮೀನಿನ ಮಾಹಿತಿ ಪಡೆದಿದ್ದು ಅದರ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆಯನ್ನು ರೂಪಿಸಲಾಗುವುದು, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಜಮೀನನ್ನು ಕಾದಿರಿಸುವ ಬಗ್ಗೆ ಸಂಬಂಧಿಸಿದ ಇಲಾಖೆಯ ಜೊತೆಯಲ್ಲಿ ಚರ್ಚೆ ನಡೆಸಿ ನಂತರ ನಿರ್ಧಾರ ತೆಗೆದುಕೊಳ್ಳತ್ತೇವೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಪಾಯಿ ಕರ್ಮಚಾರಿಗಳ ಜೀವನ ಗುಣಮಟ್ಟ ಸುಧಾರಿಸಲು ಸರಕಾರದಿಂದ ಉತ್ತಮ ಸೌಲಭ್ಯವನ್ನು ಮಾಡಿಕೊಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ಎಂ. ಲಕ್ಷ್ಮೀ ಪ್ರಸಾದ್, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಯೋಗೀಶ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.