ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆ ► ಕೊೖಲದಲ್ಲಿ ಗೋಕುಲ ಗ್ರಾಮ ಅನುಷ್ಠಾನಕ್ಕೆ ಮುನ್ನುಡಿ

(ನ್ಯೂಸ್ ಕಡಬ) newskadaba.com ಕಡಬ, ಆ.25, ಪಾಳುಬಿದ್ದಿದ್ದ ಕೊೖಲ ಪಶು ಸಂಗೋಪನ ಕ್ಷೇತ್ರ ಕಳೆದ ನಾಲ್ಕೈದು ವರ್ಷದಳಿಂದ ಹಲವಾರು ಕಾರಣಗಳಿಗಾಗಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಹೆಸರು ಮಾಡುತ್ತಿದೆ. ಡಿ.ವಿ.ಸದಾನಂದ ಗೌಡರು ಇಲ್ಲಿಗೆ ಪಶುವೈದ್ಯಕೀಯ ಕಾಲೇಜು ಘೋಷಣೆ ಮಾಡಿ ಈಗ ಸಿದ್ದರಾಮಯ್ಯ ಕಾಲದಲ್ಲಿ ಅದು ಅನುಷ್ಠಾನವಾಗುತ್ತಿರುವುದು ಒಂದೆಡೆಯಾದರೆ ಇತ್ತ ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆಗಾಗಿ ಕ್ಷೇತ್ರದಲ್ಲಿ ಗೋಕುಲ ಗ್ರಾಮ ಅನುಷ್ಠಾನ ಮಾಡಲು ಮುನ್ನುಡಿ ಬರೆಯಲಾಗಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಮೃತ ಯೋಜನೆಯಲ್ಲಿ ರಾಜ್ಯದ ಒಟ್ಟು 12 ಪಶು ಸಂಗೋಪನಾ ಕ್ಷೇತ್ರದಲ್ಲಿ ಗೋಕುಲ ಗ್ರಾಮ ಅನುಷ್ಠಾನವಾಗುತ್ತಿದ್ದು, ಈಗಾಗಲೇ ರಾಜ್ಯದ ಬೀದರ್, ಕರಿಗುಪ್ಪೆ ಯಲ್ಲಿ ಯೋಜನೆ ಪ್ರಾರಂಭವಾಗಿದೆ. ಈ ಯೋಜನೆ ಜಿಲ್ಲೆಯ ಮಟ್ಟಿಗೆ ಪ್ರಥಮವಾಗಿದೆ. ಇದರಿಂದಾಗಿ ಔಷದೀಯ ಗುಣಗಳುಳ್ಳ ದೇಶೀಯ ಗೋತಳಿಗಳನ್ನು ಸಾಕುವವರಿಲ್ಲದೆ ಅಳಿವಿನಂಚಿನಲ್ಲಿರುವ ಮಲೆನಾಡು ಗಿಡ್ಡ ತಳಿ ರಾಸುಗಳ ಉಳಿವಿಗೆ ಕೇಂದ್ರದ ಸರಕಾರ ದಿಟ್ಟ ಕ್ರಮಕೈಗೊಂಡಂತ್ತಾಗಿದೆ. ಗೋಕುಲ ಗ್ರಾಮದಲ್ಲಿ ದೇಶೀಯ ಹಸುಗಳ ಸಾಕಾಣೆಕೇಂದ್ರ ಎನ್ನುವುದನ್ನು ಸಾಬೀತುಪಡಿಸುವುದರೊಂದಿಗೆ ದೇಶೀಯ ಹಸುಗಳನ್ನು ರೈತರಿಗೆ ಒದಗಿಸುವ ಕೇಂದ್ರವಾಗಿ ಮಾರ್ಪಡಲಿದೆ. ಇಲ್ಲಿ ಅಳಿವಿನಂಚಿನಲ್ಲಿರುವ ಗಿರ್, ಸಾಹಿವಾಲ್, ರಾಥಿ ಮೊದಲಾದ ತಳಿಗಳ ಸಂರಕ್ಷಣೆ ನಡೆಯಲಿದೆ. ಕೊೖಲದಲ್ಲಿ ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ನಡೆಯಲಿದೆ. ಇನ್ನು ಒಂದು ತಿಂಗಳಲ್ಲಿ ಕೊೖಲದಲ್ಲಿಯೂ ಕೇಂದ್ರ ತನ್ನ ಕಾರ್ಯಾರಂಭ ಮಾಡಲಿದೆ.

ಕೊೖಲ ಪಶು ಸಂಗೋಪನಾ ಕ್ಷೇತ್ರದ ಕಛೇರಿಗೆ ಹೊಂದಿಕೊಂಡಿರುವ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಈ ಯೋಜನೆ ಅನುಷ್ಟಾನವಾಗಲಿದ್ದು, ಸುಮಾರು 75 ಲಕ್ಷ ರೂ ನಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಯೋಜನೆ ಅನುಷ್ಟಾನವಾಗಲಿದೆ. ಸರಕಾರ ಯೋಜನೆಗಾಗಿ ಈಗಾಗಲೇ 1.55 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ, ಈ ಪೈಕಿ ಜಿಲ್ಲೆಯ ಆಸುಪಾಸಿನ ಆರೋಗ್ಯವಂತ ಗಿಡ್ಡ ತಳಿ ರಾಸುಗಳ ಖರೀದಿಗಾಗಿ 30 ಲ್ಷ ರೂ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ 1.25 ಕೋಟಿ ರೂ ಬಳಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ. ಆರಂಭದಲ್ಲಿ 100 ರಾಸುಗಳನ್ನು ಖರೀದಿಸಿ ಅವುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಿ ತಳಿ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತದೆ, ಹುಟ್ಟುವ ಕರುಗಳನ್ನು ಆಸಕ್ತ ರೈತರಿಗೆ ಮಾರಾಟ ಮಾಡಲಾಗುತ್ತದೆ, ಗೋಉತ್ಪನ್ನದ ಮೌಲ್ಯ ವರ್ಧನೆಗಾಗಿ ಮಲೆನಾಡು ಗಿಡ್ಡ ತಳಿ ಸಾಕಾಣಿಕೆ ರೈತ ಸಂಘವನ್ನು ಸ್ಥಾಪಿಸಬೇಕಾಗುತ್ತದೆ. ದೇಶೀ ಹಸುಗಳ ವೈಜ್ಞಾನಿಕ ಸಂರಕ್ಷಣೆಯೊಂದಿಗೆ ತಳಿ ಅಭಿವೃದ್ಧಿಯ ಮುಖ್ಯ ಉದ್ದೇಶ ಹೊಂದಿರುವ ಈ ಗೋಕುಲ ಗ್ರಾಮ ಅನುಷ್ಟಾನಕ್ಕಾಗಿ ಕೊೖಲ ಪಶು ಸಂಗೋಪನಾ ಕೇಂದ್ರದ ಅಧಿಕಾರಿಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿ ರಾಸುಗಳ ಹುಡುಕಾಟಕ್ಕೆ ಪ್ರಾರಂಭಿಸಿದ್ದಾರೆ.
ಗೋಕುಲ ಗ್ರಾಮ ಕಟ್ಟಡ ನಿರ್ಮಾಣಕ್ಕೆ ಕಾಲಾವಕಾಶ ಬೇಕಾಗುವುದರಿಂದ ಸಧ್ಯ ಪಶು ಸಂಗೋಪನಾ ಕ್ಷೇತ್ರದಲ್ಲಿ ಲಭ್ಯವಿರುವ ಕಟ್ಟಡಗಳನ್ನು ಬಳಸಿಕೊಂಡಿ ಇನ್ನು ಒಂದು ತಿಂಗಳಲ್ಲಿ ಕೇಂದ್ರ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ದೇಶೀಯ ಗೋತಳಿಗಳ ಉತ್ಪನ್ನಗಳಿಗೆ ಇತ್ತೀಚಿನ ದಿನಗಳಲ್ಲಿ ಬಾರೀ ಬೇಡಿಕೆಯಿದ್ದು, ಈ ತಳಿಗಳ, ಸಗಣಿ, ಹಾಲು , ಗಂಜಲ, ಮುಂತಾದುಗಳನ್ನು ಬಳಸಿ ಔಷದ, ಆಹಾರ ಹಾಗೂ ಗ್ಯಾಸ್ ಪಡೆಯುವ ಘಟಕ ಆರಂಭಿಸುವ ಯೋಜನೆ ಕೂಡಾ ಇದೆ. ದೇಶದಲ್ಲಿ ಒಟ್ಟು ದೇಶೀ ಹಸುಗಳ ತಳಿಗಳಿದ್ದು, ಭಾರತದ ಒಟ್ಟು ಹಾಲು ಉತ್ಪಾದನೆಯ ಶೇ 20 ರಷ್ಟು ಕೊಡುಗೆ ದೇಶೀ ಹಸುಗಳದ್ದಾಗಿದೆ. ದೇಸಿ ಹಸುಗಳ ಪ್ರೋಟೀನ್ಯುಕ್ತ (ಎ2)ಹಾಲಿಗೆ ಬಹು ಬೇಡಿಕೆಯಿದೆ. ಈ ಹಿನ್ನೆಯಲ್ಲಿ ಗೋಕುಲ ಗ್ರಾಮದ ಮೂಲಕ ದೇಸೀ ಹಸುಗಳ ಸಂರಕ್ಷಣೆಗೆ ಪಣತೊಡಲಾಗಿದೆ.

Also Read  ವಾಹನಗಳಿಗೆ ಆಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ಯುವಕ!!

ಈ ಯೋಜನೆಯ ಅನುಷ್ಟಾನಕ್ಕಾಗಿ ರೈತರಿಂದ ನೇರವಾಗಿ ರಾಸುಗಳನ್ನು ಖರೀದಿ ಮಾಡಲು ನಿರ್ಧರಿಸಿರುವುದರಿಂದ ದ.ಕ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೈತರ ಬಳಿಯಿರುವ ಮಲೆನಾಡು ಗಿಡ್ಡ ತಳಿಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ದ.ಕ ಜಿಲ್ಲೆಯಲ್ಲಿ ಒಂದರಲ್ಲೇ 1500 ಮಲೆನಾಡು ಗಿಡ್ಡ ತಳಿಗಳು ಇದ್ದು, ಉಡುಪಿ ಜಿಲ್ಲೆಯ ಕಾರವಾರ, ಜೋಯ್ಡಾ, ಕುಂದಾಪುರ ಕಾರ್ಕಾಳ ಹಾಗೂ ದ,ಕ ಜಿಲ್ಲೆಯ ಸುಳ್ಯ ಪುತ್ತೂರು ಪ್ರದೇಶಗಳಲ್ಲಿ ಕೂಡಾ ಗಿಡ್ಡ ತಳಿಗಳು ಹೇರಳವಾಗಿ ಕಂಡು ಬರುತ್ತಿವೆ. ಈ ಬಗ್ಗೆ ಈಗಾಗಲೇ ಜಾಹಿರಾತು ನೀಡಿರುವ ಕೊೖಲ ಪಶು ಸಂಗೋಪನಾ ಕ್ಷೇತ್ರದ ಅಧಿಕಾರಿಗಳು ಎಲ್ಲೆಲ್ಲಿ ಮಾರಾಟದ ಗಿಡ್ಡ ತಳಿಗಳು ಇವೆ ಅವುಗಳನ್ನು ಖರೀದಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಈ ಕಾರಣಕ್ಕಾಗಿ ಹಲವಾರು ರೈತರು ಕೇಂದ್ರದ ಅಧಿಕಾರಿಗಳನ್ನು ಸಂಪರ್ಕ ಮಾಡಲು ಶುರುಮಾಡಿದ್ದಾರೆ. ಮುಖ್ಯವಾಗಿ ಗಿಡ್ಡತಗಳ ಮಾಹಿತಿ ಕಲೆ ಹಾಕಿ ಬಳಿಕ ಅಲ್ಲಿಗೆ ತಜ್ಞ ವೈದ್ಯರ ತಂಡ ಭೇಟಿ ನೀಡಿ ಮಾರಾಟ ಮಾಡ ಬಯಸುವ ರೈತರ ರಾಸುಗಳ ರಕ್ತ ಸಂಗ್ರಹ ಮಾಡಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತಾರೆ. ಇದರ ವರದಿ ಬಳಿಕ ದನಗಳು ಖರೀದಿಗೆ ಯೋಗ್ಯವಾಗಿವೆ ಎಂದು ಖಾತ್ರಿ ಮಾಡಿಕೊಂಡು 5000 ದಿಂದ 20000 ದ ವರೆಗೆ ದರ ನಿಗದಿ ಮಾಡಿ ಖರೀದಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಈ ಯೋಜನೆ ಐದು ವರ್ಷದಲ್ಲಿ ಪೂರ್ಣಗೊಂಡು ಅನುಷ್ಟಾನವಾಗಬೇಕಾಗುವುದರಿಂದ ಅಧಿಕಾರಿಗಳು ಅತೀ ಜಗರೂಕತೆಯಿಂದ ಮುಂದಡಿಯಿಡುತ್ತಿದ್ದಾರೆ.

Also Read  ದಕ್ಷಿಣ ಕನ್ನಡದಲ್ಲಿ ನಿಯಂತ್ರಣಕ್ಕೆ ಬಾರದ ಕೋವಿಡ್ ➤ ಲಾಕ್ ಡೌನ್ ವಿಸ್ತರಣೆ..?!


ಕೊೖಲ ಪಶು ಸಂಗೋಪನಾ ಕ್ಷೇತ್ರದಲ್ಲಿ ಗಿರಿರಾಜ ಕೋಳಿಗಳ ಆಧಿನಿಕ ಕೋಳಿ ಫಾರ್ಮ್ ಕಾರ್ಯಾಚರಿಸುತ್ತಿದೆ, ಹಂದಿ ಸಾಕಾಣೆ, ಇನ್ನೊಂದೆಡೆ ಆಧುನಿಕ ದನದ ಕೊಟ್ಟಿಗೆ ನಿರ್ಮಾಣವಾಗಿದ್ದು ಸುಮಾರು 150 ಮುರ್ರಾ ಎಮ್ಮೆಗಳನ್ನು ಸಾಕಾಲಾಗುತ್ತಿದೆ. ಆದರೆ ಇಲ್ಲಿ ಬೇಕಾದಷ್ಟು ಸಿಬಂದಿಗಳೇ ಇಲ್ಲ. ಮೂರು ತಜ್ಞ ವೈದ್ಯರು, ಒಬ್ಬ ಜಾನುವಾರು ಅಭಿವೃದ್ಧಿ ಅಧಿಕಾರಿ, ಒಬ್ಬ ಪಶುವೈದ್ಯ ಸಹಾಯಕ, ಕೃಷಿ ಫೀಲ್ಡ್‌ಮೆನ್, 32 ಡಿ ಗ್ರೂಪ್ ನೌಕರರ ಹುದ್ದೆ ಖಾಲಿ ಇದೆ. ಈ 32 ಜನಕ್ಕಾಗಿ ಗುತ್ತಿಗೆಯಲ್ಲಿ ಭರ್ತಿ ಮಾಡಿಕೊಳ್ಳಲಾಗಿದೆ, ಉಳಿದಂತೆ ಹುದ್ದೆಗಳು ಬಾಕಿ ಇವೆ, ಈಗಾಗಲೆ ಇಲ್ಲಿರುವ ಕೋಳಿ, ಹಂದಿ, ದನ ಸಾಕಾಣೆಗಳಿಗೆ ಈ ಸಿಬ್ಬಂದಿಗಳು ಸಾಕಾಗುತ್ತಿಲ್ಲ. ಇನ್ನು ಗೋಕುಲ ಗ್ರಾಮ ಯೋಜನೆಗೆ ಸಿಬಂದಿ ನೇಮಕಾತಿ ಬಗ್ಗೆ ಸರಕಾರದ ಅಧಿಸೂಚನೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ಇದರಿಂದಾಗಿ ಇಲ್ಲಿನ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಸಿಬಂದಿಗಳನ್ನು ಒದಗಿಸಿ ಎಂದು ಇಲ್ಲಿನ ಅಧಿಕಾರಿಗಳು ಸಂಭಂದಪಟ್ಟವರಿಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಸ್ಪಂದನ ದೊರಕಿಲ್ಲ. ಈ ಹಿನ್ನೆಯಲ್ಲಿ ಯೋಜನೆ ಅನುಷ್ಟಾ ಸುಲಭದ ಮಾತಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ದೇಶೀಯ ಗೋತಳಿಗಳ ಸಂರಕ್ಷಣೆಗಾಗಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ದೇಶಿಯ ತಳಿಗಳ ಸಾಕಿ ವೃದ್ಧಿ ಮಾಡಿ ದೇಶದ ಸಂಪತ್ತಾಗಿ ಪರಿವರ್ತಿಸುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. ಇನ್ನು ಒಂದು ತಿಂಗಳಲ್ಲಿ ಗೋಕುಲ ಗ್ರಾಮ ಆರಂಭವಾಗಲಿದ್ದು, ರೈತರು ಈ ಯೋಜನೆಯ ಅನುಷ್ಠಾನಕ್ಕೆ ಸಹಕರಿಸಬೇಕು, ರೈತರು ತಮ್ಮಲ್ಲಿರುವ ಗಿಡ್ಡ ತಳಿ ರಾಸುಗಳನ್ನು ಮಾರಾಟ ಮಾಡಲು ಇಚ್ಚಿಸುವುದಿದ್ದರೆ ತಕ್ಷಣ ಪಶುಸಂಗೋಪನಾ ಕ್ಷೇತ್ರವನ್ನು ಸಂಪರ್ಕಿಸಬಹುದು ಎಂದು ಕೊೖಲ ಪಶುಸಂಗೋಪನಾ ಕ್ಷೇತ್ರದ ಉಪನಿರ್ದೆಶಕರಾದ ಡಾ|ರಮೇಶ್ ಕುಮಾರ್ ತಿಳಿಸಿದ್ದಾರೆ.

Also Read  ಹಿಂದುಳಿದ ವರ್ಗಗಳ ವಿದ್ಯಾರ್ಥಿವೇತನ : ಅವಧಿ ವಿಸ್ತರಣೆ

 

error: Content is protected !!
Scroll to Top