(ನ್ಯೂಸ್ ಕಡಬ) newskadaba.com, ಮಂಗಳೂರು, ಜ.24 ಪ್ರಕೃತಿ ವಿಕೋಪದ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ತಾಲೂಕು ಮಟ್ಟದಲ್ಲಿಯೂ ತಹಶೀಲ್ದಾರ್ ನೇತೃತ್ವದಲ್ಲಿ ವಿಪತ್ತು ನಿರ್ವಹಣಾ ಕಾರ್ಯಪಡೆಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ವಿಪತ್ತು ನಿರ್ವಹಣೆಯ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ತುರ್ತು ಪ್ರವಾಹ ಅಣುಕು ಪ್ರದರ್ಶನ, ಆರೋಗ್ಯ ಇಲಾಖೆಯಿಂದ ತುರ್ತು ಪ್ರವಾಹ ನಿರ್ವಹಣೆ, ತಾಲೂಕು ಮಟ್ಟದಲ್ಲಿ ವಿಪತ್ತು ನಿರ್ವಹಣಾ ಕಾರ್ಯಪಡೆ, ಶಿಕ್ಷಣ ಇಲಾಖೆಯಿಂದ ತುರ್ತು ಸಂದರ್ಭದಲ್ಲಿ ಮಕ್ಕಳ ಸುರಕ್ಷಿತ ಕ್ರಮ, ನಿರಾಶ್ರಿತ ಕೇಂದ್ರಗಳ ಸ್ಥಾಪನೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾ ಯೋಜನೆಗೆ ಸಂಬಂಧಪಟ್ಟಂತೆ ವರದಿ ಸಿದ್ದಪಡಿಸಿ ಸಲ್ಲಿಸಬೇಕು ಎಂದರು. ಕಳೆದ ವರ್ಷದ ಪ್ರಾಕೃತಿಕ ವಿಕೋಪವನ್ನು ಗಮನಿಸಿ ಮುಂಜಾಗರೂಕತೆ ಕ್ರಮಗಳ ಕುರಿತು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಶಾಲೆಗಳಲ್ಲಿಯೂ ಶಾಲಾ ಸುರಕ್ಷತಾ ವಿಪತ್ತು ನಿರ್ವಹಣಾ ಯೋಜನೆ ರೂಪಿಸಬೇಕು. ಕಳೆದ ಬಾರಿ ಪ್ರವಾಹದ ಭೀತಿ ಎದುರಾದ ಸಂಧರ್ಭದಲ್ಲಿ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ದೋಣಿಗಳ ಅಭಾವ ಉಂಟಾಗಿದ್ದ ಕಾರಣ ಈ ಬಾರಿ ಅಂತಹ ತೊಂದರೆಗಳು ಸಂಭವಿಸದಿರುವಂತೆ ಹೆಚ್ಚುವರಿಯಾಗಿ ದೋಣಿ, ಲಘು ಬೋಟುಗಳನ್ನು ಖರೀದಿಸಿ, ಅಗ್ನಿಶಾಮಕ ಹಾಗೂ ಗೃಹರಕ್ಷಕ ದಳಗಳಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲೆಯ ಎಲ್ಲಾ ಸರಕಾರಿ ವಾಹನಗಳಲ್ಲಿ ಅಧಿಕಾರಿಗಳ ವಾಹನಗಳಲ್ಲಿ ವಿಪತ್ತುಗಳ ಸಂದರ್ಭದಲ್ಲಿ ಬಳಕೆಯಾಗುವ ಅಗತ್ಯ ತುರ್ತು ಸಲಕರಣೆಗಳ ಕಿಟ್ ಕಾಯ್ದಿರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯ್ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.