ರಸ್ತೆ ಬದಿಯ ಮೀನು ಮಾರಾಟ ಗೊಂದಲ ► ತೆರವಿಗೆ ಬಂದ ಅಧಿಕಾರಿಯ ವಿರುದ್ಧ ತಿರುಗಿ ಬಿದ್ದ ಮೀನು ಮಾರಾಟಗಾರ

(ನ್ಯೂಸ್ ಕಡಬ) newskadaba.com ಕಡಬ, ಆ.25, ಆಲಂಕಾರಿನ ರಾಜ್ಯ ಹೆದ್ದಾರಿಬದಿಯಲ್ಲಿ ಹಸಿಮೀನು ಮಾರಾಟ ಗೊಂದಲ ಇನ್ನೂ ಜೀವಂತವಾಗಿದ್ದು ಗುರುವಾರ ರಸ್ತೆ ಬದಿಯಲ್ಲಿ ಹಸಿ ಮೀನು ಮಾರಾಟ ಮಾಡುವುದನ್ನು ತೆರವು ಮಾಡಲು ಬಂದ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಬರಿಗೈಯಲ್ಲಿ ವಾಪಾಸ್ಸಾದ ಘಟನೆ ನಡೆದಿದೆ.


ಮೀನು ಮಾರಾಟಗಾರ ಹಾಗೂ ಕೆಲವರು ತೆರವಿಗೆ ಬಂದ ಅಧಿಕಾರಿಯ ವಿರುದ್ಧ ತಿರುಗಿ ಬಿದ್ದ ಪರಿಣಾಮ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸ್ಸಾಗಿರುವುದರಿಂದ ಪ್ರಕರಣ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಆಲಂಕಾರು ಪೇಟೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವಾಹನದಲ್ಲಿಟ್ಟು ಮೀನು ಮಾರಾಟ ಮಾಡುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಲಿಖಿತ ದೂರು ನೀಡಿದ್ದ ಬಗ್ಗೆ ಪರಿಶೀಲನೆಗಾಗಿ ಲೋಕೋಪಯೋಗಿ ಇಂಜಿನಿಯರ್ ನಾಗರಾಜ್ ಗುರುವಾರ ಮಧ್ಯಾಹ್ನದ ವೇಳೆ ಸ್ಥಳಕ್ಕಾಗಮಿಸಿದ್ದರು. ಸ್ಥಳ ಪರಿಶೀಲಿಸಿದ ಇಂಜಿನಿಯರ್ ಇಲ್ಲಿ ಮೀನು ಮಾರಾಟಕ್ಕೆ ಅವಕಾಶವಿಲ್ಲ ವಾಹನವನ್ನು ತೆರವುಗೊಳಿಸುವಂತೆ ವ್ಯಾಪಾರಿಗೆ ಸೂಚಿಸಿದರು. ಆದರೆ ಇಂಜಿನಿಯರ್ರವರ ಮಾತನ್ನು ಧಿಕ್ಕರಿಸಿದ ಮಾರಾಟಗಾರ ನನಗೆ ಪಂಚಾಯತ್ನಿಂದ ಪರವಾನಿಗೆ ಇದೆ ನಾನು ಇಲ್ಲೇ ಮಾರಾಟ ಮಾಡುವುದಾಗಿ ಪ್ರತ್ಯುತ್ತರಿಸಿದ. ನಿನಗೆ ತಲೆಕೆಟ್ಟಿದ್ಯಾ ಪಂಚಾಯತ್ ಪರವಾನಿಗೆ ನೀಡಿದೆಯಾದರೆ ಮಾರ್ಕೆಟ್ನಲ್ಲಿಯೇ ಮೀನು ಮಾರಾಟ ಮಾಡು ಇಲ್ಲಿಂದ ತೆರವು ಮಾಡು ಎಂದು ಉತ್ತರಿಸಿದಾಗ, ನೀವು ಏನು ಮಾಡುತ್ತೀರಿ ನೋಡೋಣ ನಾನು ತೆರವು ಮಾಡಲ್ಲ ಎಂದು ಅಧಿಕಾರಿಯನ್ನೇ ಗದರಿಸಿದ. ಇದೇ ವೇಳೆ ನೆರೆದಿದ್ದ ಕೆಲವರು ಮೀನು ವ್ಯಾಪಾರಿಯನ್ನೇ ಬೆಂಬಲಿಸಿದರು. ಕೊನೆಗೆ ಮಾತಿಗೆ ಮಾತು ಬೆಳೆದು ಇಂಜಿನಿಯರ್ ವಾಹನ ತೆರವುಗೊಳಿಸಲಾಗದೆ ಬರಿಗೈಯಲ್ಲಿ ಹಿಂತಿರುಗಿದರು.

Also Read  ಓಡಬಾಯಿ: ಅಂಬ್ಯುಲೆನ್ಸ್ ಮತ್ತು ಓಮ್ನಿ ಕಾರು ಮುಖಾಮುಖಿ ಢಿಕ್ಕಿ


ಕೆಲ ದಿನಗಳ ಹಿಂದೆ ಆಲಂಕಾರು ಪೇಟೆಯಲ್ಲಿ ವಾಹನದ ಮೂಲಕ ಹಸಿಮೀನು ಮಾರಾಟವನ್ನು ತಡೆಯುವಂತೆ ಗ್ರಾಮ ಪಂಚಾಯತ್ಗೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ತಡೆಯಾಜ್ಞೆಯನ್ನು ಜಾರಿ ಮಾಡಿದ್ದರು. ಆದರೆ ಗ್ರಾಮ ಪಂಚಾಯತ್ ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜೊತೆಗೆ ಇದೀಗ ಸಾರ್ವಜನಿಕರ ದೂರನ್ನು ನಿರ್ಲಕ್ಷಿಸಿದ್ದು, 2016ರ ಫೆಬ್ರವರಿ ತಿಂಗಳ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಪೇಟೆಯ ನೈರ್ಮಲ್ಯವನ್ನು ಕಾಪಾಡುವ ಸಲುವಾಗಿ ಹಸಿಮೀನನ್ನು ಪಂಚಾಯತ್ ನಿರ್ಮಿಸಿ ಕೊಟ್ಟಿರುವ ಹಸಿಮೀನು ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಲು ಅವಕಾಶ ಎಂದು ನಿರ್ಣಯಿಸಿದ್ದನ್ನು ಈಗ ಬದಲಾಯಿಸಿ ರಸ್ತೆ ಬದಿಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಗ್ರಾಮದ ಅಭಿವೃದ್ದಿ ಹಾಗು ಆರೋಗ್ಯ ಪೂರ್ಣ ಪರಿಸರ ನಿರ್ಮಾಣಕ್ಕೆ ಕೈಗೊಳ್ಳುವ ಸರ್ವ ಸದಸ್ಯರ ಸಾಮಾನ್ಯ ಸಭೆಯ ನಿರ್ಣಯಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಪಂಚಾಯಿತಿಗೆ ಆದಾಯ ಬರುವುದಾದರೆ ಹಿಂದಿನ ನಿರ್ಣಯಗಳನ್ನು ಮರು ನಿರ್ಣಯ ಮಾಡಿ ಮತ್ತೆ ರಸ್ತೆ ಬದಿಯಲ್ಲಿ ಹಸಿ ಮೀನು ಮಾರಾಟಕ್ಕೆ ಅನುಮತಿ ನೀಡಬಹುದು, ಸ್ವಚ್ಛತೆಯ ವಿಚಾರ ಇಲ್ಲಿ ಗೌನವಾಗುತ್ತದೆ ಎಂದು ನಾಗರೀಕರು ಆರೋಪ ವ್ಯಕ್ತಪಡಿಸುತ್ತಿದ್ದಾರೆ.

error: Content is protected !!
Scroll to Top