(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21 ಮಂಗಳೂರು ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಮೂಲಕ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವುದರಿಂದ ಬೆಳೆ ಮಾಹಿತಿ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು “ಬೆಳೆ ದರ್ಶಕ್” ಮೊಬೈಲ್ ಆಪ್ ಅಭಿವೃದ್ಧಿ ಪಡಿಸಲಾಗಿದ್ದು, ರೈತರಿಗೆ ಆಕ್ಷೇಪಣೆ ಸಲ್ಲಿಸಲು ಜನವರಿ 30 ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
ರೈತರು ಬೆಳೆ ದರ್ಶಕ ಮೊಬೈಲ್ ಆಪ್ ಅಥವಾ ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ಬೆಳೆ ಮಾಹಿತಿ/ವಿಸ್ತೀರ್ಣದ ಮಾಹಿತಿ ಕುರಿತು ಆಕ್ಷೇಪಣೆ ಸಲ್ಲಿಸಬಹುದು. ಇದಲ್ಲದೆ ರೈತರು ಲಿಖಿತವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆ ವಿವರ: ಬೆಳೆ ಸಮೀಕ್ಷೆ ಮಾಹಿತಿ ಪ್ರಕಾರ ಯಾವುದೇ ಬೆಳೆ ಮಾಹಿತಿ ಲಭ್ಯವಿಲ್ಲದ ರೈತರು ತಾವು ಬೆಳೆ ಬೆಳೆದಿರುವುದಾಗಿ ಆಕ್ಷೇಪಣೆ ವ್ಯಕ್ತಪಡಿಸಬಹುದು. ಬೆಳೆ ಮಾಹಿತಿ ಪ್ರಕಾರ ಪಾಳು/ ಕಟಾವಾದ ಪ್ರದೇಶ ಎಂದು ನಮೂದಿಸಿದ್ದು, ರೈತರು ತಾವು ಬೆಳೆ ಬೆಳೆದಿರುವುದಾಗಿ ಆಕ್ಷೇಪಣೆ ವ್ಯಕ್ತಪಡಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.